ಬಿಎಸ್‌ಎನ್‌ಎಲ್ ಶಾಖೆ ಸಿಬ್ಬಂದಿ ಮೇಲೆ ಗ್ರಾಹಕರು ಅಸಮಾಧಾನ

0
Customers upset over BSNL branch staff
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದಲ್ಲಿ ಸೋಮವಾರ ಸಂಜೆ 5.30ರಿಂದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಕಡಿತಗೊಂಡ ಪರಿಣಾಮ ಗ್ರಾಹಕರು ಪರದಾಡಿ, ಸ್ಥಳೀಯ ಶಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆಯಿತು.

Advertisement

ಜಿಲ್ಲೆಯ ವಾಣಿಜ್ಯ ಕೇಂದ್ರವಾಗಿರುವ ಪಟ್ಟಣದಲ್ಲಿ ಸೋಮವಾರ ಸಂಜೆಯಿಂದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಕಡಿತಗೊಂಡ ಪರಿಣಾಮ ಗ್ರಾಹಕರು ಕರೆ, ಎಸ್‌ಎಂಎಸ್ ಹಾಗೂ ಇಂಟರ್‌ನೆಟ್ ಸೇವೆಯಿಂದ ವಂಚಿತವಾಗಿದ್ದಾರೆ. ಏಕಾಏಕಿ ನೆಟ್‌ವರ್ಕ್ ಕಡಿತದಿಂದ ಗಲಿಬಲಿಗೊಂಡ ಗ್ರಾಹಕರು ಮಂಗಳವಾರ ಬೆಳಿಗ್ಗೆಯಿಂದಲೇ ಪಟ್ಟಣದ ಜೋಡು ರಸ್ತೆಯಲ್ಲಿನ ಬಿಎಸ್‌ಎನ್‌ಎಲ್ ಕಚೇರಿಗೆ ಆಗಮಿಸಿ ಸಮಸ್ಯೆಯ ಕುರಿತು ವಿಚಾರಿಸಲು ಮುಂದಾಗಿದ್ದಾರೆ. ಆದರೆ ಸ್ಥಳೀಯ ಸಿಬ್ಬಂದಿ ಹಾಗೂ ಶಾಖಾ ವ್ಯವಸ್ಥಾಪಕರು ಸರಿಯಾಗಿ ಸ್ಪಂದಿಸುತ್ತಿಲ್ಲ, ಹುಬ್ಬಳ್ಳಿಯಿಂದ ಅಧಿಕಾರಿಗಳು ಬಂದು ಸರಿ ಮಾಡುತ್ತಾರೆ ಎಂದು ಹಾರಿಕೆಯ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.

ಪಟ್ಟಣದಲ್ಲಿ ನೂರಾರು ಗ್ರಾಹಕರು ಅದರಲ್ಲೂ ಗಣ್ಯ ವರ್ತಕರು, ಇಂಟರ್‌ನೆಟ್ ಸೆಂಟರ್ ಸೇರಿ ನೂರಾರು ಗ್ರಾಹಕರು ಬಿಎಸ್‌ಎನ್‌ಎಲ್ ಸೇವೆಯನ್ನೇ ಬಳಸುತ್ತಿದ್ದಾರೆ. ಆದರೆ ಕಳೆದ 12 ಗಂಟೆಗಳ ಕಾಲ ನೆಟ್‌ವರ್ಕ್ ಸಮಸ್ಯೆಯಾದರೂ ಸಹ ದುರಸ್ತಿಗೆ ಮುಂದಾದಂತಿಲ್ಲ. ಪಟ್ಟಣದಲ್ಲಿ ಬಿಎಸ್‌ಎನ್‌ಎಲ್ ಕಚೇರಿಗೆ ದೂರು ನೀಡಲು ಒಂದು ಸಂಖ್ಯೆಯೂ ಸಹ ಇಲ್ಲ. ಪರಿಣಾಮ ಖಾಸಗಿ ನೆಟವರ್ಕ್ಗಳ ಸೇವೆಗೆ ಪೈಪೋಟಿ ನೀಡಬೇಕಾದ ದಿನಗಳಲ್ಲಿ ಬಿಎಸ್‌ಎನ್‌ಎಲ್ ಈ ರೀತಿಯಾಗಿ ಸೇವೆ ನೀಡುತ್ತಿರುವುದು ವಿಪರ್ಯಾಸ. ನಮ್ಮ ನೆಟವರ್ಕ್ ಎಂದು ನಾವು ಬಿಎಸ್‌ಎನ್‌ಎಲ್ ಬಳಸುತ್ತಿದ್ದೇವೆ. ಆದರೆ ಸೇವೆ ನೀಡುತ್ತಿರುವ ಸ್ಥಳೀಯ ಶಾಖೆಯವರು ಗ್ರಾಹಕರಿಗೆ ಸರಿಯಾಗಿ ಸ್ಪಂದಿಸದಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಡಿಸಿದರು.

ಸರ್ಕಾರಿ ಆಸ್ಪತ್ರೆಯ ಸುರಕ್ಷಾ ಸಮಿತಿ ಸದಸ್ಯ ಶರಣಪ್ಪ ಚಳಗೇರಿ, ಪುರಸಭೆ ಮಾಜಿ ಸದಸ್ಯ ವಿಜಯ ರಾಯಬಾಗಿ, ಹನಮಂತಸಾ ಮೇಘರಾಜ, ಶಾಮೀದ್ ದಿಂಡವಾಡ, ನಿಂಗಪ್ಪ ಮಾಸ್ತಿ, ಅರಿಹಂತ ವಂದಕುದರಿ, ಅರುಣ ನೆಲ್ಲರು ಸೇರಿ ಇತರರು ಇದ್ದರು.

ಪಟ್ಟಣದಲ್ಲಿ ಬಿಎಸ್‌ಎನ್‌ಎಲ್ ಸರ್ವರ್ ಸಮಸ್ಯೆ ಕುರಿತು ಕಚೇರಿಗೆ ಬಂದ ಗದಗ ಡಿವಿಜನಲ್ ಅಭಿಯಂತರ ಎಚ್.ಎಫ್. ಶಿರಹಟ್ಟಿ ಮಾತನಾಡಿ, ನಿನ್ನೆ ರಾತ್ರಿ 12 ಗಂಟೆವೆರೆಗೆ ನೆಟವರ್ಕ್ ಸಮಸ್ಯೆ ಕುರಿತು ಪರಿಶೀಲಿಸಲಾಗಿದೆ. ಬೆಳಿಗ್ಗೆ 6 ಗಂಟೆಗೆ ನಮ್ಮ ಸಿಬ್ಬಂದಿಯನ್ನು ಕಳುಹಿಸಿದ್ದು, ಸಮಸ್ಯೆ ಇರುವುದರಿಂದ ಹುಬ್ಬಳ್ಳಿ, ಗದಗದಿಂದ ತಂಡ ಆಗಮಿಸುತ್ತಿದೆ. ಶೀಘ್ರವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದ ಬಳಿಕ ಗ್ರಾಹಕರು ಬಿಎಸ್‌ಎನ್‌ಎಲ್ ಕಚೇರಿಯಿಂದ ಹೊರ ನಡೆದರು.

 


Spread the love

LEAVE A REPLY

Please enter your comment!
Please enter your name here