ವಿಜಯಸಾಕ್ಷಿ ಸುದ್ದಿ, ಮುಳಗುಂದ: ದೇಹದ ಫಿಟ್ನೆಸ್ ಕಾಪಾಡಿಕೊಳ್ಳಲು ಸೈಕ್ಲಿಂಗ್ನಷ್ಟು ಉತ್ತಮ ವ್ಯಾಯಾಮ ಮತ್ತೊಂದಿಲ್ಲ. ಮಕ್ಕಳು ನಿತ್ಯ ಸೈಕ್ಲಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.
ಪಟ್ಟಣದ ಯಲಿಶಿರುಂಜ ಗುಡ್ಡದಲ್ಲಿ ಕರ್ನಾಟಕ ರಾಜ್ಯ ಗದಗ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಮೌಂಟನ್ ಸೈಕ್ಲಿಂಗ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗದಗ ಜಿಲ್ಲೆ ಕ್ರೀಡಾಪಟುಗಳ ತೌರಾಗಿದ್ದು, ಕ್ರೀಡೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಹೊಂದಿದೆ. ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣಗಳಿದ್ದು, ಕ್ರೀಡಾ ಚಟುವಟಿಕೆಗಳಿಗೆ ಮುಳಗುಂದ ಪಟ್ಟಣವೂ ಸಾಕಷ್ಟು ಸಹಕಾರ ನೀಡುತ್ತಿದೆ. ಇದರಿಂದ ಹಲವು ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಮೌಂಟನ್ ಸೈಕ್ಲಿಂಗ್ ರೋಚಕ ಕ್ರೀಡೆಯಾಗಿದ್ದು, ಇಂತಹ ಕ್ರೀಡೆಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಮುಖ್ಯ. ಕ್ರೀಡೆಯ ಮೂಲಕ ಪ್ರತಿಭೆ ಹೊರಹೊಮ್ಮುವುದರ ಜತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯವೂ ಉತ್ತಮವಾಗುತ್ತದೆ ಎಂದು ಹೇಳಿದರು.
ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಸುಂಕಾಪುರ ಮಾತನಾಡಿ, ಮುಳಗುಂದದಲ್ಲಿ ರಾಜ್ಯಮಟ್ಟದ ಸೈಕ್ಲಿಂಗ್ ಸ್ಪರ್ಧೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅವರ ಭವಿಷ್ಯಕ್ಕೆ ಉತ್ತಮ ಅವಕಾಶಗಳು ದೊರೆಯಲಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಕಣವಿ ವಹಿಸಿದ್ದರು. ಎಸ್.ಎಂ. ನೀಲಗುಂದ, ಎಂ.ಡಿ. ಬಟ್ಟೂರ, ಡಾ. ಎಸ್.ಸಿ. ಚವಡಿ, ಜಿ.ವಿ. ಪಾಟೀಲ, ಪೊಲೀಸ್ ಇನ್ಸ್ಪೆಕ್ಟರ್ ಜಿ.ಬಿ. ಸುಬ್ಬಾಪೂರಮಠ, ನಾಗರಾಜ ದೇಶಪಾಂಡೆ, ಕೆ.ಎಲ್. ಕರಿಗೌಡ್ರ, ಅಶೋಕ ಹುಣಸಿಮರದ, ಎಂ.ಕೆ. ಡಾಲಾಯತ, ವಿಲಾಸ ನೀಲಗುಂದ, ಎಸ್.ಎಂ. ಕುರಣಿ, ಐಶ್ವರ್ಯ ಕರಿಗಾರ, ಪವಿತ್ರಾ ಕುರ್ತಕೋಟಿ ಸೇರಿದಂತೆ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ನ ಸದಸ್ಯರು ಉಪಸ್ಥಿತರಿದ್ದರು.
“ದೇಹದ ಫಿಟ್ನೆಸ್ ಕಾಯ್ದುಕೊಳ್ಳಲು ಸೈಕ್ಲಿಂಗ್ನಷ್ಟು ಉತ್ತಮ ವ್ಯಾಯಾಮ ಇನ್ನೊಂದಿಲ್ಲ. ಮಕ್ಕಳು ನಿತ್ಯ ಸೈಕ್ಲಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು.”
— ಕೃಷ್ಣಗೌಡ ಪಾಟೀಲ, ಅಧ್ಯಕ್ಷರು, ಗದಗ ಜಿಲ್ಲಾ ಯುವ ಕಾಂಗ್ರೆಸ್



