ನೆಲಮಂಗಲ:- ಗ್ಯಾಸ್ ಲಿಕೇಜ್ ನಿಂದ ಮನೆಯೊಂದು ಹೊತ್ತಿ ಉರಿದು ಇಬ್ಬರು ಸಜೀವದಹನವಾಗಿರುವ ಘಟನೆ ನೆಲಮಂಗಲ ಬಳಿಯ ಅಡಕಮಾರನಹಳ್ಳಿ ಓವರ್ ಟ್ಯಾಂಕ್ ಬಳಿ ಜರುಗಿದೆ. ಘಟನೆಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.
ನಾಗರಾಜ್ 50, ಶ್ರೀನಿವಾಸ್ 50 ಮೃತರಾದ ದುರ್ದೈವಿಗಳು. ಗಂಗಯ್ಯ ಎಂಬುವವರಿಗೆ ಎರಡು ಬಾಡಿಗೆ ಮನೆಗಳು ಸೇರಿದ್ದು, ಬಳ್ಳಾರಿಯ ನಾಗರಾಜ್ ಕುಟುಂಬ ಒಂದು ಮನೆಯಲ್ಲಿ ಬಾಡಿಗೆಗೆ ಇತ್ತು. ಬೆಳಗ್ಗೆ ಕೆಲಸಕ್ಕೆ ತೆರಳುವಾಗ ನಾಗರಾಜ್ ದೇವರ ಮುಂದೆ ದೀಪ ಹಚ್ಚಿದ್ದರು. ಈ ವೇಳೆ ಖಾಲಿಯಾಗಿದ್ದ ಸಿಲಿಂಡರ್ ಬದಲಾಯಿಸಲು ಮಗ ಅಭಿಷೇಕ್ ಮುಂದಾಗಿದ್ದ. ಅಜಾಗರೂಕತೆಯಿಂದ ಸಿಲಿಂಡರ್ ಫಿಟ್ ಮಾಡುತ್ತಿದ್ದ ವೇಳೆ ಗ್ಯಾಸ್ ಲೀಕ್ ಆಗಿ ದೀಪದ ಬೆಂಕಿ ತಗುಲಿದೆ. ಬೆಂಕಿಯ ತೀವ್ರತೆಗೆ ನಾಗರಾಜ್ ಹಾಗೂ ಶ್ರೀನಿವಾಸ್ ಮೃತಪಟ್ಟಿದ್ದಾರೆ. ಅಭಿಷೇಕ್, ಶಿವಶಂಕರ್, ಲಕ್ಷ್ಮೀದೇವಿ ಮತ್ತು ಬಸವ ಎಂಬುವವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.