ಬೆಂಗಳೂರು: ನಗರದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಬಯೋಗ್ಯಾಸ್ ಉತ್ಪಾದನೆಗೆ ಮಹತ್ವ ನೀಡಲು ಗ್ರೇಟರ್ ಬೆಂಗಳೂರು ಆಡಳಿತ (ಜಿಬಿಎ) ಮುಂದಾಗಿದೆ.
ಬಯೋಗ್ಯಾಸ್ ಉತ್ಪಾದನೆಯ ಮೂಲಕ ಹೋಟೆಲ್ ಸೇರಿದಂತೆ ವಾಣಿಜ್ಯ ಬಳಕೆಗೆ ಗ್ಯಾಸ್ ಒದಗಿಸುವ ಯೋಜನೆ ಕೈಗೊಳ್ಳಲಾಗಿದೆ. ಸದ್ಯ ಕೋರಮಂಗಲದ ಬಯೋಗ್ಯಾಸ್ ಕೇಂದ್ರದಿಂದ ಕೆಲ ಹೋಟೆಲ್‌ಗಳಿಗೆ ಗ್ಯಾಸ್ ಪೂರೈಕೆ ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಜಿಬಿಎ ಮುಖ್ಯ ಆಯುಕ್ತರು ಕೋರಮಂಗಲದ ಬಯೋಗ್ಯಾಸ್ ಘಟಕಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಘಟಕದ ಕಾರ್ಯವಿಧಾನ ಕುರಿತು ಮಾಹಿತಿ ಪಡೆದುಕೊಂಡ ಅವರು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಲಯಗಳಲ್ಲಿ ಬಯೋಗ್ಯಾಸ್ ಘಟಕಗಳನ್ನು ಸ್ಥಾಪಿಸುವ ಕುರಿತು ಚರ್ಚೆ ನಡೆಸಿದರು.
ನಗರದಲ್ಲಿ ಇತರೆ ಗ್ಯಾಸ್ ಸಮಸ್ಯೆಗಳು ಎದುರಾದಾಗ ಬಯೋಗ್ಯಾಸ್ ಪರ್ಯಾಯವಾಗಿ ಬಳಸಬಹುದು. ಹಸಿ ಘನತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆ ಮಾಡಲಾಗುತ್ತಿದೆ.
ಈ ಮೊದಲು ಬಿಬಿಎಂಪಿ ವತಿಯಿಂದ 12 ಬಯೋಗ್ಯಾಸ್ ಘಟಕಗಳನ್ನು ನಿರ್ಮಿಸಲಾಗಿದ್ದು, ಅವುಗಳಲ್ಲಿ 6 ಘಟಕಗಳು (ವಾರ್ಡ್ ಸಂಖ್ಯೆ 94, 167, 168, 151, 35 ಮತ್ತು 112) ಕಾರ್ಯನಿರ್ವಹಿಸುತ್ತಿವೆ. ಪ್ರತಿ ಘಟಕದಲ್ಲಿ ದಿನಕ್ಕೆ 5 ಟನ್ ಸಾಮರ್ಥ್ಯದಲ್ಲಿ ಒಟ್ಟು 30 ಟನ್ ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸಲಾಗುತ್ತಿದೆ.
ಇನ್ನೂ ಉಳಿದ 6 ಘಟಕಗಳಲ್ಲಿ (ವಾರ್ಡ್ ಸಂಖ್ಯೆ 190, 192, 149, 139, 198 ಮತ್ತು 11) ನವೀಕರಣ ಕಾಮಗಾರಿ ನಡೆಯುತ್ತಿದೆ.
ಪ್ರತಿ ಟನ್ ಹಸಿ ತ್ಯಾಜ್ಯದಿಂದ ಸುಮಾರು 30ರಿಂದ 50 ಕೆ.ಜಿ.ವರೆಗೆ ಬಯೋಗ್ಯಾಸ್ ಉತ್ಪಾದಿಸುವ ಸಾಮರ್ಥ್ಯವಿದ್ದು, ಪ್ರತಿ ಘಟಕದಲ್ಲಿ 5 ಟನ್ ತ್ಯಾಜ್ಯದಿಂದ ಸುಮಾರು 200 ಕೆ.ಜಿ. ಗ್ಯಾಸ್ ಉತ್ಪಾದನೆ ಸಾಧ್ಯವಾಗುತ್ತದೆ.
ಈ ಬಯೋಗ್ಯಾಸ್ ಅನ್ನು ಹೋಟೆಲ್‌ಗಳ ಅಡುಗೆಗೆ ಬಳಸುವುದರ ಜೊತೆಗೆ ಜನರೇಟರ್ ಮೂಲಕ ವಿದ್ಯುತ್ ಉತ್ಪಾದಿಸಿ ಸಮೀಪದ ಉದ್ಯಾನವನಗಳಲ್ಲಿ ದೀಪ ಬೆಳಗಲು ಬಳಸಲಾಗುತ್ತಿದೆ. ಇದರಿಂದ ಸುಮಾರು 8,400 ರೂ. ಆದಾಯವೂ ಲಭ್ಯವಾಗುತ್ತಿದೆ.



