ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಒಂದು ಸಾರಿ ಡಿ.ಕೆ. ಶಿವಕುಮಾರ್ ಮುಟ್ಟಿದ್ದಕ್ಕೆ ಬಿಜೆಪಿಯವರು 66 ಸ್ಥಾನಕ್ಕೆ ಹೋಗಿದ್ದಾರೆ. ಇನ್ನೊಂದು ಸಾರಿ ಮುಟ್ಟಿದರೆ ಸಂಪೂರ್ಣ ನಿರ್ಮೂಲನೆಯಾಗುತ್ತಾರೆ ಎಂದು ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ನಡೆಸಲು ಅಧಿಕಾರಿಗಳ ಪಾತ್ರ ಮುಖ್ಯವಾಗಿದೆ. ಅಧಿಕಾರಿಗಳನ್ನು ನಿಯಂತ್ರಿಸುವುದು ಸಚಿವರ ಕೆಲಸ. ಬಿಜೆಪಿಯವರು ಹಗರಣ ಮಾಡಿದಾಗ ಇ.ಡಿ ಎಲ್ಲಿತ್ತು? ಅವರೆಲ್ಲ ಹರಿಶ್ಚಂದ್ರನ ವಂಶದವರೇನಲ್ಲ. ಯಡಿಯೂರಪ್ಪ ಜೈಲಿಗೆ ಹೋಗಿದ್ದು ಎಲ್ಲರಿಗೂ ನೆನಪಿದೆ ಎಂದರು.
ಕೋವಿಡ್ ಸಮಯದಲ್ಲಿ ಆರೋಗ್ಯ ಸಚಿವರಾಗಿದ್ದ ಸುಧಾಕರ್ ದುಡ್ಡು ದೋಚಿದರು. ಡಿ.ಕೆ. ಶಿವಕುಮಾರ್ ಪ್ರಕರಣ, ಯಡಿಯೂರಪ್ಪ ಪ್ರಕರಣ ಬೇರೆ ಬೇರೆಯೇ. ಬಿಜೆಪಿಯವರು ಡಿ.ಕೆ. ಶಿವಕುಮಾರ್ ಅವರನ್ನು ಗುರಿ ಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರಿಗೆ ಸಾಧ್ಯವಾದರೆ ನ್ಯಾಯುತವಾಗಿ ಹೋರಾಟ ಮಾಡಲಿ. ಮುಡಾ ಹಗರಣ ಆಗಿರುವುದು ಬಿಜೆಪಿ ಕಾಲದಲ್ಲಿ. ಸಿದ್ದರಾಮಯ್ಯ ಕುರುಬ ಸಮುದಾಯದವರು. ಅವರು ಎರಡನೇ ಬಾರಿ ಸಿಎಂ ಆಗಿರುವುದು ಬಿಜೆಪಿಗೆ ಸಹಿಸಲಾಗುತ್ತಿಲ್ಲ. ಜನ ನಮ್ಮ ಪರ ಇದ್ದಾರೆ ಎಂದರು.
ನಗರದಲ್ಲಿ ಕಾಂಗ್ರೆಸ್‌ನಿಂದ ಯುವ ವಿಕಾಸ ಶಿಬಿರ ಹಮ್ಮಿಕೊಳ್ಳಲಾಗಿದೆ. ಯುವ ಘಟಕದ ರಾಜ್ಯಾಧ್ಯಕ್ಷನಾಗಿ ಅಥವಾ ಪಕ್ಷದಲ್ಲಿ ಇರುತ್ತೇನೋ ಇಲ್ಲವೋ, ಆದರೆ, ನಾನು ಸಂವಿಧಾನದ ಪರವಾಗಿ ಇರುತ್ತೇನೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರ ಆಶಯದಂತೆ ನಾವು ವೈಟ್ ಟೀ ಶರ್ಟ್ ಆರ್ಮಿ ಆಚರಣೆ ಮಾಡುತ್ತಿದ್ದೇವೆ ಎಂದರು.