ಬೆಂಗಳೂರು: ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡ ಕ್ಷಣಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ಸಿ.ಪಿ.ಯೋಗೇಶ್ವರ್ ಯಾವ ಪಕ್ಷದಿಂದ ಸ್ಪರ್ಧೆ ಮಾಡ್ತಾರೆ ಅನ್ನೋದೇ ಕೂತೂಹಲ ಕೆರಳಿಸಿದೆ. ಇದರ ಬೆನ್ನಲ್ಲೇ ಸಿಪಿ ಯೋಗೇಶ್ವರ್, ಡಿಕೆ ಶಿವಕುಮಾರ್ ಒಂದೇ ಕಾರಿನಲ್ಲಿ ತೆರಳಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಾರೆ. ಈ ಮೂಲಕ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಬಿಜೆಪಿ ನಾಯಕರ ಸಲಹೆ ಮೇರೆಗೆ ಎನ್ಡಿಎ ಟಿಕೆಟ್ ಸಿಗಬಹುದು ಎಂದು ಯೋಗೇಶ್ವರ್ ನಿನ್ನೆಯವರೆಗೂ ಕಾದು ಕುಳಿತ್ತಿದ್ದರು. ಸಂಜೆ ವರೆಗೂ ಕಾಯುತ್ತೇನೆ ಎಂದು ಯೋಗೇಶ್ವರ್ ಅವರು ಪ್ರಲ್ಹಾದ್ ಜೋಶಿ, ಸಂಸದ ಡಾ.ಸಿ.ಎನ್.ಮಂಜುನಾಥ್ಗೆ ತಿಳಿಸಿ ಎಂದು ನಿನ್ನೆ ಚನ್ನಪಟ್ಟಣದ ಖಾಸಗಿ ಹೋಟೆಲ್ನಲ್ಲಿ ತಂಗಿದ್ದರು. ಆದ್ರೆ, ಬಿಜೆಪಿ ಟಿಕೆಟ್ ಘೋಷಣೆ ಆಗದಿರುವ ಕಾರಣ ಸಿಪಿ ಯೋಗೇಶ್ವರ್ ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚಿಸಿದರು. ಬಳಿಕ ಒಂದೇ ಕಾರಿನಲ್ಲಿ ಇಬ್ಬರೂ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.