ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಕರ್ನಾಟಕ ಪ್ರಜಾಪರ ವೇದಿಕೆ ವತಿಯಿಂದ ಶಿರಹಟ್ಟಿ ಪಟ್ಟಣದಲ್ಲಿಯ ದ.ರಾ. ಬೇಂದ್ರೆ ಅವರ ಭವನವನ್ನು ಅಭಿವೃದ್ಧಿಪಡಿಸಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಕೆಂದು ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ತಾಲೂಕಾಧ್ಯಕ್ಷ ಹಸನ ತಹಸೀಲ್ದಾರ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ವರಕವಿ ದ.ರಾ .ಬೇಂದ್ರೆ ಅವರ ಸವಿನೆನಪಿಗಾಗಿ ಶಿರಹಟ್ಟಿ ಪಟ್ಟಣದಲ್ಲಿಯ ಹೃದಯಭಾಗದಲ್ಲಿ ನಿರ್ಮಿಸಿರುವ ಬೇಂದ್ರೆ ಭವನವು ಇಂದು ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸದುಪಯೋಗವಾಗದೇ ಅನೈತಿಕ ಚಟುವಟಿಕೆಗಳ ತಾಣವಾಗಿ ಗುರುತಿಸಿಕೊಳ್ಳುತ್ತಿರುವುದು ದುರ್ದೈವ. ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಅವರು ಸಾಂಸ್ಕೃತಿಕ ಭವನವನ್ನು ನಿರ್ಮಾಣ ಮಾಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳ ಸಮರ್ಪಕ ನಿರ್ವಹಣೆ ಇಲ್ಲದೇ ನಿರ್ಲಕ್ಷö್ಯಕ್ಕೆ ಒಳಗಾಗಿದೆ. ಆದ್ದರಿಂದ ಭವನಕ್ಕೆ ಅವಶ್ಯಕವಿರುವ ಮೂಲಸೌಲಭ್ಯವನ್ನು ಕಲ್ಪಿಸಬೇಕೆಂದು ಮನವಿಯಲ್ಲಿ ಸಲ್ಲಿಸಿದರು.



