ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಪ್ರತಿಯೊಂದು ವಿಶ್ವಕರ್ಮ ಸಮಾಜದ ಮನೆಗಳಿಗೆ 2026ರ ದಿನದರ್ಶಿಕೆಯನ್ನು ಉಚಿತವಾಗಿ ವಿತರಿಸಲಾಗುವುದು. ದಿನದರ್ಶಿಕೆ ಬಿಡುಗಡೆಯೊಂದಿಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ ವಿಶ್ವಕರ್ಮ ಸಮಾಜದ ಸಾಧಕರನ್ನು ಸನ್ಮಾನಿಸುವ ಮತ್ತು ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರೊಂದಿಗೆ ಸಮುದಾಯದ ಸಮಸ್ಯೆ ಹಾಗೂ ಸಲಹೆಗಳ ಕುರಿತು ಸಂವಾದ ಏರ್ಪಡಿಸಲಾಗಿದೆ. ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ.ಕಡ್ಲಿಕೊಪ್ಪ ಹೇಳಿದರು.
ಅವರು ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗ ಸಂಸ್ಥೆಗಳು ಮತ್ತು ಗದಗ ಜಿಲ್ಲೆಯ ಸಮಸ್ತ ವಿಶ್ವಕರ್ಮ ಸಮುದಾಯದ ವತಿಯಿಂದ ಡಿ.21ರ ಬೆಳಿಗ್ಗೆ 10.30 ಗಂಟೆಗೆ ನಗರದ ವಿಜಯನಗರ ಬಡಾವಣೆಯ ವಿಶ್ವಕರ್ಮ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವ 2026ರ ದಿನದರ್ಶಿಕೆ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ಮತ್ತು ಸಂವಾದ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭದ ಸಾನ್ನಿಧ್ಯವನ್ನು ನರಗುಂದ ತಾಲೂಕಿನ ಚಿಕ್ಕುಂಬಿ ನಾಗಲಿಂಗೇಶ್ವರ ಮಠದ ಶ್ರೀ ಅಭಿನವ ನಾಗಲಿಂಗ ಸ್ವಾಮೀಜಿ ವಹಿಸುವರು. ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಉದ್ಘಾಟಿಸುವರು. ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ.ಕಡ್ಲಿಕೊಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸುಜ್ಞಾನಮೂರ್ತಿ ಪಿ, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಾಬು ಪತ್ತಾರ, ರಾಜ್ಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಈಶ್ವರಾಚಾರ್ಯ ಎಂ.ಪಿ., ಕರ್ನಾಟಕ ಟ್ಯಾಕ್ಸ್ ಪ್ರಾಕ್ಟಿಶನರ್ ಅಸೋಸಿಯೇಶನ್ ಬೆಂಗಳೂರು ಅಧ್ಯಕ್ಷ ಎಸ್. ನಂಜುಂಡ ಪ್ರಸಾದ, ಶ್ರೀಕ್ಷೇತ್ರ ವರವಿ ಮೌನೇಶ್ವರ ದೇವಸ್ಥಾನ ಹಾಗೂ ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೋಹನ ನರಗುಂದ ಆಗಮಿಸುವರು ಎಂದರು.
ಬೆಳಿಗ್ಗೆ 9.30ಕ್ಕೆ ಕೊಪ್ಪಳದ ಎಸ್.ಎನ್.ಎಸ್. ಬಡಿಗೇರ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಮಾಜದ ಸರ್ವರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.
ಸಭೆಯಲ್ಲಿ ವಿಶ್ವಕರ್ಮ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್. ಬಡಿಗೇರ, ಗದಗ ಶ್ರೀಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಉಮೇಶ ಕೆ.ಅರ್ಕಸಾಲಿ, ಬೆಟಗೇರಿ ಶ್ರೀಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಶ್ರೀಧರ ಕೊಣ್ಣೂರ, ಜಿಲ್ಲಾ ವಿಶ್ವಕರ್ಮ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಮೌನೇಶ ಸಿ.ಬಡಿಗೇರ (ನರೇಗಲ್ಲ), ಶಂಕರಾಚಾರ್ಯ ಕಂಚಗಾರ ಇದ್ದರು.
ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ವ್ಯವಸ್ಥಾಪಕ ಮಧುಸೂದನ ವಿಶ್ವಕರ್ಮ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ವಾಯ್.ಶಿಲ್ಪಿ ಕಲಬುರ್ಗಿ ಹಾಗೂ ಬಾಗಲಕೋಟಿಯ ನಾಗಲಿಂಗಪ್ಪ ಗಂಗೂರ, ಯಾದಗಿರಿಯ ಬಸಣ್ಣ ಮೋ.ಬಡಿಗೇರ, ಕೊಪ್ಪಳದ ದೇವೇಂದ್ರಕುಮಾರ ಪತ್ತಾರ ಮತ್ತು ಗದಗ ಶ್ರೀಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಉಮೇಶ ಕೆ.ಅರ್ಕಸಾಲಿ, ಪತ್ರಕರ್ತ ಮೌನೇಶ ಸಿ.ಬಡಿಗೇರ (ನರೇಗಲ್ಲ), ವರದಿಗಾರರಾದ ಗಿರೀಶ ಕಮ್ಮಾರ ಮತ್ತು ಮಂಜುನಾಥ ಪತ್ತಾರ ಇವರನ್ನು ಸನ್ಮಾನಿಸಲಾಗುವುದು ಎಂದು ರಾಜಗೋಪಾಲ ಡಿ.ಕಡ್ಲಿಕೊಪ್ಪ ತಿಳಿಸಿದರು.



