ವಿಜಯಸಾಕ್ಷಿ ಸುದ್ದಿ, ಬೆಳಗಾ: ವಿಬೆಳಗಾವಿ ಅಧಿವೇಶನದಲ್ಲಿ ತಲಾ ಆದಾಯದಲ್ಲಿ ಉತ್ತರ ಕರ್ನಾಟಕ ಭಾಗದ ಹಿಂದುಳಿದಿರುವಿಕೆಯ ಬಗ್ಗೆ ವಿಶ್ಲೇಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 1985ರಲ್ಲಿ ನಾನು ಹೈನುಗಾರಿಕೆ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದು, ಅಂದಿನಿಂದಲೂ ಉತ್ತರ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆಗೆ ಆಸಕ್ತಿ ಕಡಿಮೆಯಿದೆ ಎಂದರು.
ಬೆಂಗಳೂರು ಸಹಕಾರಿ ಹಾಲು ಒಕ್ಕೂಟದಲ್ಲಿ ದಿನವೊಂದಕ್ಕೆ 17 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತದೆ. ಆದರೆ ಕಲಬುರಗಿ, ಯಾದಗಿರಿ, ಬೀದರ್ ರಾಯಚೂರು ಸಹಕಾರಿ ಹಾಲು ಒಕ್ಕೂಟದಲ್ಲಿ ದಿನವೊಂದಕ್ಕೆ ಕೇವಲ 67 ಸಾವಿರ ಲೀಟರ್ ಹಾಲು ಶೇಖರಣೆಯಾಗುತ್ತದೆ. ರಾಜ್ಯದ ಎಲ್ಲಾ ಸಹಕಾರಿ ಒಕ್ಕೂಟಗಳಲ್ಲಿ ದಿನವೊಂದಕ್ಕೆ 1 ಕೋಟಿ ಲೀಟರ್ ಹಾಲು ಸಂಗ್ರಹಣೆಯಾದರೆ, ಇದರಲ್ಲಿ ಉತ್ತರ ಕರ್ನಾಟಕ ಭಾಗದ ಸಹಕಾರಿ ಹಾಲು ಒಕ್ಕೂಟಗಳಲ್ಲಿ ಕೇವಲ 10 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತದೆ.
ಹೈನುಗಾರಿಕೆ ಆದಾಯದ ಉತ್ತಮ ಮೂಲವಾಗಿದೆ. ರಾಜ್ಯ ಸರ್ಕಾರವು ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ರೈತರಿಗೆ ಪ್ರತಿ ಲೀಟರ್‌ಗೆ ರೂ.7 ಪ್ರೋತ್ಸಾಹ ಧನ ನೀಡುತ್ತಿದೆ. ಇದಕ್ಕಾಗಿ ಪ್ರತಿದಿನ ರೂ.5 ಕೋಟಿ ವೆಚ್ಚವಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆ ಹೆಚ್ಚಾದರೆ ಜನರ ಆದಾಯವೂ ಹೆಚ್ಚಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಭಿಪ್ರಾಯಪಟ್ಟರು.



