ಕಾರವಾರ: ದಲಿತ ಸಿಎಂ ಕುರಿತ ಚರ್ಚೆ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಸಿಎಂ ಆಯ್ಕೆ ಕುರಿತು ಅಂತಿಮ ನಿರ್ಧಾರ ಹೈಕಮಾಂಡ್ ಕೈಯಲ್ಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
“ಸಿಎಂ ಆಯ್ಕೆ ಐದು ವರ್ಷಗಳ ಅವಧಿಗೆ ಆಗಿದೆ. ಕೇವಲ ಚರ್ಚೆ ನಡೆದ ತಕ್ಷಣ ಸಿಎಂ ಮಾಡುವುದು ಸಾಧ್ಯವಿಲ್ಲ. ಸಿಎಂ ಆಕಾಂಕ್ಷಿಗಳು ಹಲವರು ಇದ್ದಾರೆ. ನಾವ್ಯಾರೂ ಸಿಎಂ ರೇಸ್‌ನಲ್ಲಿ ಇಲ್ಲ” ಎಂದು ಹೇಳಿದರು.
ಪಕ್ಷದೊಳಗಿನ ಗೊಂದಲವನ್ನು ಒಪ್ಪಿಕೊಂಡ ಜಾರಕಿಹೊಳಿ, “ಗೊಂದಲ ನಿವಾರಣೆ ಅಂದರೆ ಸ್ಥಾನ ಬದಲಾವಣೆ ಎಂದಲ್ಲ. ಕಾರ್ಯಕರ್ತರು, ನಾಯಕರು ಸೇರಿದಂತೆ ಪಕ್ಷದೊಳಗೆ ಕೆಲವು ಗೊಂದಲಗಳಿವೆ. ಅವು ಬಗೆಹರಿಯಬೇಕು. ಎಲ್ಲರೂ ಸಿಎಂ ಆಗಲು ಸಾಧ್ಯವಿಲ್ಲ. ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಈಗ ಸಿಎಂ ಇದ್ದಾರೆ. ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದೆ” ಎಂದು ತಿಳಿಸಿದ್ದಾರೆ.
ಸಿಎಂ ಮಾಡಿದ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ಅವರು, “ಟ್ವೀಟ್ ಬಗ್ಗೆ ಅವರೇ ಹೇಳಬೇಕು. ಪಕ್ಷದಲ್ಲಿ ಕೆಲವು ಸಮಸ್ಯೆಗಳಿವೆ. ಅವು ಸರಿಯಾಗುತ್ತವೆ” ಎಂದರು. ಇದೇ ವೇಳೆ ಬಿಜೆಪಿಯ ಭ್ರಷ್ಟಾಚಾರ ಆರೋಪಗಳಿಗೆ ತಿರುಗೇಟು ನೀಡಿದ ಅವರು, “ಬಿಜೆಪಿ ನಾಯಕರು ಇತರರ ಮೇಲೆ ಆರೋಪ ಮಾಡುತ್ತಾರೆ. ಆದರೆ ಅವರದೇ ಎಂಎಲ್ಎ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತಮ್ಮ ಭ್ರಷ್ಟಾಚಾರದ ಬಗ್ಗೆ ಅವರೇ ಸಾಕ್ಷಿ ನೀಡಿದ್ದಾರೆ” ಎಂದು ಕಟುವಾಗಿ ಪ್ರತಿಕ್ರಿಯಿಸಿದರು.



