ವಿಜಯಸಾಕ್ಷಿ ಸುದ್ದಿ, ಗದಗ: ಕಾವ್ಯ ಎಂದರೆ ಜೀವನಪ್ರೀತಿ, ಕಾವ್ಯ ಎಂದರೆ ಅಂತ:ಕರಣ, ಕಾವ್ಯ ಎಂದರೆ ಮನುಷ್ಯತ್ವ. ಅದರ ಒಳಗಡೆ ಅಗಾಧವಾದ ಶಕ್ತಿ-ಸಾಮರ್ಥ್ಯವಿದೆ. ಸಮಾಜದ ದೌರ್ಜನ್ಯ, ಅನ್ಯಾಯದ ವಿರುದ್ಧ ಸಿಡಿದೇಳುವ ಶಕ್ತಿ ಕನ್ನಡ ದಲಿತ ಕಾವ್ಯಕ್ಕಿದೆ ಎಂದು ಕವಿ ದೊಡ್ಡಣ್ಣ ಭಜಂತ್ರಿ ನುಡಿದರು.
ಅವರು ಇತ್ತೀಚೆಗೆ ಹುಲಕೋಟಿಯ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಲಿತ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಹಕಾರ ರೇಡಿಯೋ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ರಾಜ್ಯಮಟ್ಟದ ದಲಿತ ಯುವ ಕಾವ್ಯ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ದಲಿತ ಕಾವ್ಯದಲ್ಲಿ ಜೀವಪರ ಕಾಳಜಿಯ ಚಿಂತನೆಯಿದೆ. ಡಾ. ಸಿದ್ಧಲಿಂಗಯ್ಯ, ಅರವಿಂದ ಮಾಲಗತ್ತಿ, ಸುಬ್ಬು ಹೊಲೆಯಾರ, ಡಾ. ಸತ್ಯಾನಂದ ಪಾತ್ರೋಟ, ಮುಡ್ನಾಕೂಡು ಚಿನ್ನಸ್ವಾಮಿ ಮುಂತಾದ ಕವಿಗಳ ಕಾವ್ಯಗಳಲ್ಲಿ ಮನುಷ್ಯಕೇಂದ್ರಿತ ಚಿಂತನೆಗಳಿವೆ. ದಲಿತ ಯುವ ಕಾವ್ಯ ಕಮ್ಮಟ ಮುಂದಿನ ತಲೆಮಾರಿನ ಬರಹಗಾರರಿಗೆ ದಿಕ್ಸೂಚಿಯಾಗಲಿ ಎಂದರು.
2ನೇ ದಿನದ ಕಮ್ಮಟದಲ್ಲಿ `ನಾನು ನನ್ನ ಕವಿತೆ; ಕವಿಗಳೊಂದಿಗೆ ಸಂವಾದ’ ಗೋಷ್ಠಿಯಲ್ಲಿ ಮೈಸೂರಿನ ಮೌಲ್ಯಸ್ವಾಮಿ, ಶಿವಮೊಗ್ಗದ ಡಾ. ಎಸ್.ಕೆ. ಮಂಜುನಾಥ, ಗದುಗಿನ ಈರಣ್ಣ ಮಾದರ, ಚಿತ್ರದುರ್ಗದ ಬಿ.ಎಂ. ಗುರುನಾಥ, ವಿಜಯನಗರದ ಅಂಜಲಿ ಬೆಳಗಲ್, ಹಾಸನದ ಐಚನಹಳ್ಳಿ ಕೃಷ್ಣಪ್ಪ ಭಾಗವಹಿಸಿ ತಮ್ಮ ಕವಿತೆಗಳನ್ನು ವಾಚಿಸಿದರು.
ಕರ್ನಾಟಕದ ವಿವಿಧ ಜಿಲ್ಲೆಗಳ 50ಕ್ಕೂ ಹೆಚ್ಚು ಯುವ ಕವಿಗಳು ಕಮ್ಮಟದಲ್ಲಿ ಭಾಗವಹಿಸಿದ್ದರು. ಹುಲಕೋಟಿಯ ಮುಕ್ತಿವನದಲ್ಲಿ ಆಯ್ದ ದಲಿತ ಕಾವ್ಯ ಓದು ಚರ್ಚೆಯನ್ನು ಏರ್ಪಡಿಸಿದ್ದು ವಿಶೇಷವಾಗಿತ್ತು. ಕಮ್ಮಟದ ನಿರ್ದೇಶಕರಾಗಿ ಡಾ. ಸದಾಶಿವ ದೊಡ್ಡಮನಿ, ಸಹ ನಿರ್ದೇಶಕರಾಗಿ ಡಾ. ಲಕ್ಷ್ಮೀ ನಾರಾಯಣಸ್ವಾಮಿ, ಡಾ. ಸೋಮಕ್ಕ ಎಂ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ದಲಿತ ಕಲಾ ಮಂಡಳಿಯ ಕ್ರಾಂತಿಗೀತೆಗಳು, ಯುವಗಾಯಕ ಕೃಷ್ಣಾ ಕಡಿಯವರ ಭಾವಗೀತೆಗಳು ಮೂಡಿಬಂದವು. ದ.ಸಾ.ಪದ ಉಪಾಧ್ಯಕ್ಷ ಡಾ. ವೈ.ಎಂ. ಭಜಂತ್ರಿ, ಖಜಾಂಚಿ ಡಾ. ಎಚ್.ಬಿ. ಕೋಲ್ಕಾರ, ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಭಾಗವಹಿಸಿದ್ದರು.
ಎರಡು ದಿನಗಳ ಕಾವ್ಯಕಮ್ಮಟದಲ್ಲಿ `ದಲಿತ ಕಾವ್ಯ ಮತ್ತು ಯುವಕರು’ ಎಂಬ ವಿಷಯದ ಕುರಿತು ಶಿವಮೊಗ್ಗದ ಡಾ. ಸುಭಾಷ ಮರವಂತೆ, ‘ದಲಿತ ಕಾವ್ಯದ ಆಶಯ ಅಭಿವ್ಯಕ್ತಿಯ ವಿನ್ಯಾಸಗಳು’ ವಿಷಯವಾಗಿ ಹುಬ್ಬಳ್ಳಿಯ ಅನುಸೂಯಾ ವೈ.ಟಿ, ಕನ್ನಡ ದಲಿತ ಕಾವ್ಯ ಚಳವಳಿ ಕುರಿತು ಡಾ. ಅಪ್ಪಗೆರೆ ಸೋಮಶೇಖರ ಉಪನ್ಯಾಸ ನೀಡಿದರು.


