ಬಾಲಿವುಡ್ ಸಿನಿಮಾ ರಂಗದಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದ್ದು, ರಿತೇಶ್ ದೇಶಮುಖ್ ಅವರ ಮುಂಬರುವ ಚಿತ್ರ ‘ರಾಜಾ ಶಿವಾಜಿ‘ಯ ಭಾಗವಾಗಿದ್ದ 26 ವರ್ಷದ ಡ್ಯಾನ್ಸರ್ ಶವವಾಗಿ ಪತ್ತೆಯಾಗಿದ್ದಾರೆ. ಹೌದು ಎರಡು ದಿನಗಳ ಹಿಂದೆ ಸತಾರಾ ಜಿಲ್ಲೆಯಲ್ಲಿ ‘ರಾಜಾ ಶಿವಾಜಿ’ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿತ್ತು.
ಕೃಷ್ಣ ಮತ್ತು ವೆನ್ನಾ ನದಿಯ ಸಂಗಮದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಈ ಚಿತ್ರೀಕರಣದಲ್ಲಿ ಡ್ಯಾನ್ಸರ್ ಸೌರಭ್ ಶರ್ಮಾ ಕೂಡ ಭಾಗಿಯಾಗಿದ್ದರು. ಶೂಟಿಂಗ್ ವೇಳೆ ಕೃಷ್ಣ ನದಿ ಬಳಿ ತೆರಳಿದ ಸೌರಭ್ ಅವರು ಕೊಚ್ಚಿಕೊಂಡು ಹೋದರು. 2 ದಿನಗಳ ನಂತರ ಅವರು ಶವವಾಗಿ ಪತ್ತೆಯಾಗಿದ್ದಾರೆ.
‘ರಾಜಾ ಶಿವಾಜಿ’ ಸಿನಿಮಾದ ಚಿತ್ರೀಕರಣಕ್ಕಾಗಿ ಡ್ಯಾನ್ಸರ್ಗಳು ಬಣ್ಣದ ಪೌಡರ್ ಹಚ್ಚಿಕೊಂಡಿದ್ದರು. ಅದನ್ನು ತೊಳೆದುಕೊಳ್ಳಲು ಡ್ಯಾನ್ಸರ್ ಸೌರಭ್ ಅವರು ಕೃಷ್ಣ ನದಿಗೆ ಇಳಿದಿದ್ದರು. ಆಗ ಅವರು ಆಯ ತಪ್ಪಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಕೂಡಲೇ ರಕ್ಷಣಾ ತಂಡಕ್ಕೆ ಮಾಹಿತಿ ನೀಡಲಾಯಿತು.
ಆದರೂ ಕೂಡ ಸೌರಭ್ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ. ಅಪಘಾತದಿಂದ ಸೌರಭ್ ಶರ್ಮಾ ಸಾವು ಸಂಭವಿಸಿದೆ ಎಂದು ಸತಾರಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು, ಈ ದುರ್ಘಟನೆ ನಡೆದಿದ್ದರಿಂದ ‘ರಾಜಾ ಶಿವಾಜಿ’ ಸಿನಿಮಾದ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.