ವಿಜಯಸಾಕ್ಷಿ ಸುದ್ದಿ, ಗದಗ : ಸಂಪ್ರದಾಯಬದ್ಧ ಆಚರಣೆಗಳೊಂದಿಗೆ ಇಲ್ಲಿನ ಬೆಟಗೇರಿ ಹೊರವಲಯದಲ್ಲಿ ಮಂಗಳವಾರ ದಂಡಿನ ದುರ್ಗಮ್ಮ ದೇವಿ ಜಾತ್ರೆ ಸಂಭ್ರಮದಿಂದ ನಡೆಯಿತು. ಪ್ರತಿ ವರ್ಷದ ಸಂಪ್ರದಾಯದಂತೆ ನಡೆಯುವ ಜಾತ್ರೆಯಲ್ಲಿ ಮಕ್ಕಳು, ಯುವಕ-ಯುವತಿಯರು ಸೇರಿದಂತೆ ವಿವಿಧ ವಯೋಮಾನದ ಭಕ್ತರು ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಬೆಳಗಿನ ಜಾವದಿಂದ ಮಧ್ಯಾಹ್ನ 12 ಗಂಟೆವರೆಗೆ ನೈವೇದ್ಯ ಅರ್ಪಣೆ, ಹರಕೆ ತೀರಿಸುವ ವಿಧಿ-ವಿಧಾನಗಳು ನಡೆದವು.
ತಾಲೂಕಿನ ನಾಗಸಮುದ್ರ ಸಮೀಪದ ದಂಡಿನ ದುರ್ಗಮ್ಮ ದೇವಿ ಜಾತ್ರೆ ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ. ಮಹಾರಾಷ್ಟç, ಗೋವಾ, ದೆಹಲಿ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಹರಣ ಶಿಕಾರಿ ಜನಾಂಗದ ಸಾವಿರಾರು ಭಕ್ತರು ದೇವಿಯನ್ನು ಆರಾಧಿಸುತ್ತಾರೆ.
ಹರಣ ಶಿಕಾರಿ ಜನಾಂಗದವರೊಂದಿಗೆ ಇತರೆ ಸಮುದಾಯದ ಭಕ್ತರು ಹೂವು-ಹಣ್ಣು, ತೆಂಗಿನಕಾಯಿಗಳನ್ನು ಅರ್ಪಿಸಿ, ದೇವಿಗೆ ಪೂಜೆ ಸಲ್ಲಿಸಿ ಕೃತಾರ್ಥರಾದರು. ನಾಗಸಮುದ್ರ ಗ್ರಾಮದ ರಸ್ತೆಯುದ್ದಕ್ಕೂ ಸಾವಿರಾರು ಭಕ್ತರು ನೆರೆದಿದ್ದರು. ಅಲ್ಲಲ್ಲಿ ಆಟಿಕೆ, ವಿವಿಧ ತಿಂಡಿಗಳ ಮಳಿಗೆಗಳನ್ನು ತೆರೆಯಲಾಗಿತ್ತು. ದೇವಿ ದರ್ಶನ ಪಡೆದ ಯುವಜನತೆ, ಮಕ್ಕಳು ತಮಗಿಷ್ಟ್ಟವಾದ ವಸ್ತುಗಳ ಖರೀದಿಯಲ್ಲಿ ಮಗ್ನರಾಗಿದ್ದರು. ಭಕ್ತರ ಕುಡಿಯುವ ನೀರಿಗಾಗಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಆರೋಗ್ಯ ಇಲಾಖೆಯು ಭಕ್ತರ ಸೇವೆಗಾಗಿ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದಿತ್ತು.
ಜಾತ್ರೆ ಆರಂಭವಾಗುವ ಮೊದಲೇ ದೂರದ ಊರಿನಿಂದ ವಿವಿಧ ವಾಹನಗಳಲ್ಲಿ ದೇವಿ ಭಕ್ತರು ಗದುಗಿನತ್ತ ಆಗಮಿಸಿದ್ದರು. ನಾಗಸಮುದ್ರದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ದೇವಸ್ಥಾನದ ಆಸುಪಾಸು ಹಾಗೂ ರಸ್ತೆ ಇಕ್ಕೆಲಗಳಲ್ಲಿ ಟೆಂಟ್ ಹೊಡೆದು ವಸತಿ ಹೂಡಿದ್ದರು. ಜಾತ್ರೆ ಮುನ್ನಾದಿನ ನಗರದ ಮಾರುಕಟ್ಟೆಯಲ್ಲಿ ಜಾತ್ರೆ ಅಡುಗೆ ಸಿದ್ಧಪಡಿಸಲು ಬೇಕಾದ ದವಸ-ಧಾನ್ಯ, ಪಾತ್ರೆ, ಪಗಡೆಗಳನ್ನು ಖರೀದಿಸಿದ್ದರು. ವಸತಿ ಮಾಡಿದ್ದ ಟೆಂಟ್‌ನಲ್ಲಿಯೇ ಮಂಗಳವಾರ ಅಡುಗೆ ಮಾಡಿಕೊಂಡು ಜಾತ್ರೆಯ ಭರ್ಜರಿ ಊಟ ಸವಿದದರು. ಕೆಲವರು ಸಂಜೆಯೇ ಸ್ವಗ್ರಾಮದತ್ತ ಹೆಜ್ಜೆ ಹಾಕಿದರು.
ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಹರಣ ಶಿಖಾರಿ ಜನಾಂಗದ ಸಾವಿರಾರು ಭಕ್ತರು ಮಂಗಳವಾರ ಬೆಳಗ್ಗೆಯಿಂದಲೇ ದೇವಿಗೆ ಹರಕೆ ತೀರಿಸಲು ಸನ್ನದ್ಧರಾಗಿದ್ದರು. ತಾಯಿ ದುರ್ಗಮ್ಮಗೆ ಜಲ, ಕ್ಷೀರಾಭಿಷೇಕ ನೆರವೇರಿಸಿದರು. ಬಳಿಕ ಹೂವಿನ ಅಲಂಕಾರ ಮಾಡಿ, ವಿಶೇಷ ಪೂಜೆ ನೆರವೇರಿಸಲಾಯಿತು. ಈ ಜಾತ್ರೆ ಮೂಲಕವೇ ಆಯಾ ವರ್ಷದ ತಮ್ಮ ಕಾರ್ಯಚಟುವಟಿಕೆಯನ್ನು ಅವರು ಆರಂಭಿಸುತ್ತಾರೆ. ಜಾತ್ರೆ ಅತ್ಯಂತ ಶಾಂತಿಯುತವಾಗಿ ನಡೆಯುವಂತೆ ಕಾನೂನು-ಸುವ್ಯವಸ್ಥೆ ಪಾಲಿಸಲು ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕ್ರಮಗಳನ್ನು ಕೈಕೊಂಡಿದೆ.
ಹರಣ ಶಿಕಾರಿ ಜನಾಂಗದ ಜನರ ಆದಿ ದೇವತೆ ಎಂದೇ ಕರೆಯಿಸಿಕೊಳ್ಳುವ ದಂಡಿನ ದುರ್ಗಮ್ಮ ಜಾತ್ರೆ ತನ್ನದೇ ಆದ ವಿಶೇಷತೆ ಹೊಂದಿದೆ. ಈ ಜನಾಂಗದ ಜನತೆ ದೇಶದ ಯಾವುದೇ ಭಾಗದಲ್ಲಿ ನೆಲೆಸಿದ್ದರೂ ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ನಗರಕ್ಕೆ ಆಗಮಿಸಿ ಶಕ್ತಿ ದೇವತೆಯ ದರ್ಶನ ಪಡೆಯುತ್ತಾರೆ. ತಾವು ಕೈಗೊಳ್ಳುವ ಎಲ್ಲ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿ ಎಂದು ಬೇಡಿಕೆ ಹೊತ್ತು, ತಮ್ಮ ಹರಕೆ ತೀರಿಸುವ ಪದ್ಧತಿಯನ್ನು ಈ ಜನಾಂಗದವರು ನಡೆಸಿಕೊಂಡು ಬಂದಿದ್ದಾರೆ. ಜನಾಂಗದ ಪ್ರತಿಯೊಬ್ಬರೂ ಸಕುಟುಂಬ ಸಮೇತರಾಗಿ ಜಾತ್ರೆ ಆಗಮಿಸಿ ದೇವಿ ದರ್ಶನ ಪಡೆಯುತ್ತಾರೆ.