ಬಳ್ಳಾರಿ:- ಕೋಡಿಬಿದ್ದ ಕೆರೆಯಲ್ಲಿ ಅವಘಡ ಒಂದು ಸಂಭವಿಸಿದ್ದು, ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕನೋರ್ವ ಮೃತಪಟ್ಟಿರುವ ಘಟನೆ ಜರುಗಿದೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಂಡಬೊಮ್ಮನಹಳ್ಳಿಯಲ್ಲಿ ನಡೆದಿದೆ. 21 ವರ್ಷದ ಚೇತನ್ ಕುಮಾರ್ ಮೃತ ದುರ್ದೈವಿ ಎನ್ನಲಾಗಿದೆ. ಕಳೆದ ವಾರ ಭಾರೀ ಮಳೆಯಿಂದಾಗಿ ಗಂಡಬೊಮ್ಮನಹಳ್ಳಿ ಕೆರೆ ಸಂಪೂರ್ಣ ಭರ್ತಿ ಆಗಿತ್ತು. ಅಪಾರ ಪ್ರಮಾಣದಲ್ಲಿ ಮಳೆ ನೀರು ಹರಿದು ಬಂದು ಕೆರೆ ಕೋಡಿ ಕೂಡಾ ಬಿದ್ದಿತ್ತು.
ಕೋಡಿ ಬಿದ್ದಿದ್ದರಿಂದ ಯುವಕ ಚೇತನ್ ಕುಮಾರ್ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ. ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ಕೋಡಿ ಬಿದ್ದಿರುವ ಜಾಗಕ್ಕೆ ಚೇತನ್ ಬಿದ್ದಿದ್ದಾನೆ. ಚೇತನ್ ಕೆರೆಗೆ ಬಿದ್ದ ಕೂಡಲೇ ಅಕ್ಕಪಕ್ಕದ ಜನ ರಕ್ಷಣೆಗೆ ಮುಂದಾದರೂ ಯಾವುದೇ ಪ್ರಯೋಜನ ಆಗಲಿಲ್ಲ. ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಚೇತನ್ ಕುಮಾರ್ ಶವ 200 ಮೀಟರ್ ದೂರದಲ್ಲಿ ಸಿಕ್ಕಿದೆ.
ಯುವಕನ ಮೃತದೇಹ ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.