ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಬಹುತೇಕ ರಸ್ತೆಗಳಲ್ಲಿ ತಗ್ಗು-ಗುಂಡಿಗಳು ತುಂಬಿಕೊಂಡಿದ್ದು, ಅನೇಕ ರಸ್ತೆಗಳಲ್ಲಿ ಪೈಪ್‌ಲೈನ್‌ಗಾಗಿ ತೆಗೆದಿರುವ ಗುಂಡಿಗಳನ್ನು ಕಾಟಾಚಾರಕ್ಕೆ ಮುಚ್ಚಲಾಗಿದೆ. ರಸ್ತೆಗಳ ಬದಿಯಲ್ಲಿರುವ ಸಂಪರ್ಕ ರಸ್ತೆಯ ಚರಂಡಿ ಮೇಲಿರುವ ಸಿಡಿಗಳು ಅಲ್ಲಲ್ಲಿ ಕುಸಿತ ಕಂಡಿವೆ. ಅನೇಕ ರಸ್ತೆಗಳು ಮಧ್ಯದಲ್ಲಿ ಕುಸಿದಿದ್ದು, ಕೆಲವು ರಸ್ತೆಗಳು ಸುಧಾರಣೆಗೊಳ್ಳುತ್ತಿದ್ದರೂ ಸಹ ಗುಣಮಟ್ಟದ ಕಾಮಗಾರಿಯಾಗುತ್ತಿಲ್ಲ ಎನ್ನುವ ಸಾರ್ವಜನಿಕರ ದೂರುಗಳು ಸಾಮಾನ್ಯ ಎನ್ನುವಂತಾಗಿದೆ.
ಈಗ 6-7 ವರ್ಷಗಳ ಹಿಂದೆ ಒಳಚರಂಡಿ ಯೋಜನೆಗಾಗಿ ರಸ್ತೆಗಳನ್ನು ಅಗೆದಾಗಿನಿಂದ ದುರಸ್ತಿ ಕಾಣದೆ ತಗ್ಗು ಗುಂಡಿಗಳಾಗಿ ಮಾರ್ಪಟ್ಟಿದ್ದು, ರಸ್ತೆ ನಡುವೆಯೇ ಚೇಂಬರ್ ಬಾಕ್ಸ್ಗಳು ಬಾಯ್ದರೆದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ರಸ್ತೆಗಳಲ್ಲಿ ಕುಸಿದ ಸಿಡಿಗಳು, ರಸ್ತೆಗಳು ಹಾಗೂ ಪೈಪ್‌ಲೈನ್‌ಗಾಗಿ ಹಾಗೆಯೆ ಬಿಟ್ಟಿರುವ ತಗ್ಗುಗಳು ಬಹುತೇಕ ಕಡೆಗಳಲ್ಲಿ ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಇದಕ್ಕೆ ಸಂಬಂಧಿಸಿದ ಇಲಾಖೆ ಕ್ರಮ ತೆಗೆದುಕೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಈ ಕುರಿತಂತೆ ಪುರಸಭೆ ಅಧಿಕಾರಿಗಳನ್ನು ಸಂಪರ್ಕಿಸಲಾಗಿ, ಅನುದಾನ ಬಂದ ತಕ್ಷಣ ರಸ್ತೆ ಸುಧಾರಣೆ ಕೈಗೆತ್ತಿಕೊಳ್ಳಲಾಗುವದು ಎನ್ನುತ್ತಾರೆ. ದಿನದಿಂದ ದಿನಕ್ಕೆ ರಸ್ತೆ ಅವಘಡಗಳು ಹೆಚ್ಚುತ್ತಿದ್ದು, ಪುರಸಭೆಯವರು ಕ್ರಮಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.