ಬೆಂಗಳೂರು: ಕೋರ್ಟ್‍ನಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ಸುಮಾರು 500ಕ್ಕೂ ಹೆಚ್ಚು ಜನರನ್ನು ವಂಚಿಸಿದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಜೈಸನ್ ಡಿಸೋಜಾ ಮತ್ತು ಲವೀನಾ ಎಂದು ಗುರುತಿಸಲಾಗಿದೆ.
ವಂಚಿತ ಜೋಡಿ, ನಿರೋದ್ಯೋಗಿಗಳು ಮತ್ತು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಮಾಯಕರನ್ನು ಟಾರ್ಗೆಟ್ ಮಾಡಿ, ಡಿ ಗ್ರೂಪ್ ಉದ್ಯೋಗ ಭರವಸೆ ನೀಡಿ, ಒಬ್ಬೊಬ್ಬರಿಂದ 10 ರಿಂದ 25 ಲಕ್ಷ ರೂ. ವರೆಗೆ ಹಣ ಪಡೆದು ವಂಚಿಸುತ್ತಿದ್ದರು. ವರದಿ ಪ್ರಕಾರ, ಹೀಗೆ ಸುಮಾರು ಐನೂರಕ್ಕೂ ಹೆಚ್ಚು ಜನರಿಂದ 25 ಕೋಟಿ ರೂ.ಗೂ ಹೆಚ್ಚು ಹಣ ವಂಚಿಸಲಾಗಿದೆ.
ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ಆರ್ಡರ್ ಪ್ರತಿ ತೋರಿಸುವ ಮೂಲಕ, ಆರ್ಡರ್ ಪಡೆದಂತೆ ಜನರನ್ನು ನಂಬಿಸುವ ಈ ಜೋಡಿ, ಕೆಲಸ ಕೇಳಿದ್ರೆ ನಾಳೆ ನಾಡಿದ್ದು ಎಂದು ಕಥೆ ಹೇಳುತ್ತಿದ್ದರು. ಕೊನೆಗೆ ಫೋನ್ ರಿಸೀವ್ ಮಾಡುತ್ತಲೇ ಇರಲಿಲ್ಲ. ಮೋಸ ಹೋಗಿರೋದು ಗೊತ್ತಾಗಿ ಸಿಸಿಬಿಗೆ ಸಂತ್ರಸ್ಥರು ದೂರು ನೀಡಿದ್ದರು.
ಆರೋಪಿಗಳು ವಂಚನೆಗಾಗಿ ಒಂದು ಜಾಲವನ್ನೇ ಸೃಷ್ಟಿಸಿದ್ದರು. ಜನರನ್ನು ನಂಬಿಸಲು, ಹಣ ಪಡೆಯಲು ಏಜೆಂಟ್‍ಗಳನ್ನು ನೇಮಿಸಿಕೊಂಡಿದ್ದರು. ದಾಖಲೆ ಪರಿಶೀಲನೆ ಅಂತ ಖಾಸಗಿ ಹೋಟೆಲ್‍ಗೆ ಕರೆಸಿಕೊಂಡು ಬೇರೆಯವರಿಗೆ ಆಫರ್ ಲೆಟರ್ ಬಂದಿದೆ ಎಂದು ನಕಲಿ ಆಫರ್ ಲೆಟರ್ ತೋರಿಸಿ ವಂಚಿಸುತ್ತಿದ್ದರು. ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.



