ವಿಜಯಸಾಕ್ಷಿ ಸುದ್ದಿ, ನರೇಗಲ್ : ಭಾವೈಕ್ಯತೆಯ ಕೇಂದ್ರವೆಂದೇ ಕರೆಯಿಸಿಕೊಳ್ಳುವ ನರೇಗಲ್ ಸಂತ ಹಜರತ್ ರೈಮಾನ್ ಶಾವಲಿಯವರ ಉರುಸು ಜೂನ್ 1ರಿಂದ 3ರವರೆಗೆ ಹಿಂದೂ-ಮುಸ್ಲಿಂ ಭಾವೈಕ್ಯತೆಯಾಗಿ ದರ್ಗಾ ಉರುಸು ನಡೆಯಲಿದೆ.
ಮಹೋನ್ನತವಾದ ಇಚ್ಛಾಶಕ್ತಿ, ತಪೋಶಕ್ತಿಗಳಿಂದ ಪ್ರತಿಕ್ಷಣವನ್ನು ಮನುಕುಲದ ಏಳಿಗೆಗಾಗಿ, ಸಕಲರಿಗೆ ಒಳಿತನ್ನೇ ಬಯಸುತ್ತಾ ಬದುಕಿ ಬಾಳಿ ತಮ್ಮ ಮಹತ್ತರವಾದ ಆತ್ಮಬಲದ ದಿವ್ಯ ಶಕ್ತಿಯಿಂದ ಸಕಲ ಜನಾಂಗಕ್ಕೂ ಲೇಸನ್ನು ಬಯಸುತ್ತಾ ಹಾಗೂ ಬೆಳಕು ತೋರುತ್ತಾ ಸಾಧನೆಯ ಎಲ್ಲೆಯನ್ನು ಮೀರಿರುವ ಪೂಜ್ಯರು 17ನೇ ಶತಮಾನದ ಮಧ್ಯಭಾಗದಲ್ಲಿ ಅಲಿ ಅದಿಲ್ ಶಾಹಿ ದರಬಾರದಲ್ಲಿ ಹಿರಿಯ ಧಾರ್ಮಿಕ ದಿವ್ಯ ದರ್ಶಕರಾಗಿದ್ದರು. ರಕ್ಕಸಗಿ ತಂಗಡಗಿ ಯುದ್ಧದ ನಂತರ ಕಾರಣಾಂತರದಿಂದ ಅಲ್ಲಿಂದ ಹೊರಟು ಅನೇಕ ಪ್ರದೇಶದಲ್ಲಿ ಸಂಚರಿಸಿ ನರೇಗಲ್ಲದಲ್ಲಿ ನೆಲೆಸಿದರೆಂಬ ಪ್ರತೀತಿ ಇಲ್ಲಿನ ದರಗಾದ ಸಂತರಿಗೆ ಇದೆ.
ದರಗಾದಲ್ಲಿ ಲಕ್ಷ್ಮಿ ದೇವಿಗೆ ಎಲ್ಲಾ ಹಿಂದೂ-ಮುಸ್ಲಿಂ ಸಧ್ಭಕ್ತರು ಕಾಯಿ ಒಡೆದು ಕರ್ಪೂರ ಬೆಳಗಿ ಕರಿಗೆಡಬು ಸಾಂಪ್ರದಾಯಿಕ ಎಡೆಕೊಡುವ ಪದ್ಧತಿ ಹಿಂದೂಗಳದ್ದಾಗಿದೆ. ಶ್ರೀಗಂಧದ ಮೆರವಣಿಗೆ ಮುಜಾವರವರ ಮನೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಕ್ತಿ ಭಾವದಿಂದ ದರಗಾ ತಲುಪುತ್ತಿರುವುದು ಮುಸ್ಲಿಂ ಸಂಸ್ಕೃತಿಯ ಬಿಂಬವಾಗಿರುತ್ತದೆ. ದೀಪೋತ್ಸವ, ಮದ್ದು ಹಾರಿಸುವುದು, ಖವ್ವಾಲಿ ಹಾಡುಗಾರಿಕೆ ಇತ್ಯಾದಿ ಕಾರ್ಯಕ್ರಮಗಳು ಸಾಂಗವಾಗಿ ನೆರವೇರುತ್ತಿರುವುದು ಇಲ್ಲಿ ಮುಸ್ಲಿಂ-ಹಿಂದೂ ಎಂಬ ಬೇಧವೇ ಕಂಡು ಬರದಂತೆ ಮಾಡಿದೆ.
ನರೇಗಲ್ಲ ಪಟ್ಟಣದ ಮಜಿರೆ ಗ್ರಾಮವಾದ ಕೊಚಲಾಪುರ ಗ್ರಾಮದಿಂದ ಲಕ್ಷ್ಮಿ ದೇವಿಯನ್ನು ಪಲ್ಲಕ್ಕಿ ಮೆರವಣಿಗೆಯಲ್ಲಿ ನರೇಗಲ್ಲಿಗೆ ತರುವುದು ಉರುಸಿನ ಮಹತ್ವದ ಕಾರ್ಯಕ್ರಮಗಳಲ್ಲೊಂದು. ಆ ಸಮಯದಲ್ಲಿನ ಡೊಳ್ಳು, ಜಾಂಜ್ ಮೇಳ, ಕರಡಿ ಮಜಲು, ಯುವಕರ ಕೋಲಾಟ ಮುಂತಾದವುಗಳೆಲ್ಲವೂ ನೋಡುಗರ ಮನಸೆಳೆಯುವಂತಿದ್ದು, ಹಬ್ಬದ ರಸದೌತಣ ನೀಡುತ್ತ ಭಕ್ತಿಯ ಭಾವವನ್ನು ಹುಟ್ಟಿಸುತ್ತದೆ.
ಇಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ದರ್ಗಾದ ಉರುಸಿನಲ್ಲಿ ಹಮ್ಮಿಕೊಂಡು ಹಿಂದೂ-ಮುಸ್ಲಿಂ ಸಾಮರಸ್ಯವನ್ನು ಬೆಳೆಸುವ ಸಂಪ್ರದಾಯವನ್ನು ಕಾಲಾಂತರದಿಂದಲೂ ಉಳಿಸಿ ಬೆಳೆಸಿಕೊಂಡು ಬರುತ್ತಿರುವುದರಿಂದ ಈ ದರ್ಗಾವು ಭಾವೈಕ್ಯದ ಕೇಂದ್ರ ಬಿಂದುವಾಗಿ ಕೋಮು ಸಾಮರಸ್ಯವನ್ನು ಬಿಂಬಿಸುವ ನಾಡಿನ ಕೆಲವೇ ಕೆಲವು ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ.
ಹಿಂದಿನ ಪರಂಪರೆಯಂತೆ ಶ್ರೀಗಳು ಮಹಾನ್ ಪವಾಡ ಪುರುಷರಾಗಿದ್ದರು. ಧಾರ್ಮಿಕ ಸೌಹಾರ್ದತೆಯ ಪ್ರತೀಕವಾಗಿ ಅವರು ಅನೇಕ ತೆರನಾದ ಹಬ್ಬ-ಉತ್ಸವಗಳನ್ನು ಆಚರಿಸುತ್ತಾ ಸರ್ವಧರ್ಮ ಸಮನ್ವಯದ ಹರಿಕಾರರಾಗಿದ್ದರು. ಇಂತಹ ಮಹಾತ್ಮರ ದಿವ್ಯ ಮಾರ್ಗದರ್ಶನದಲ್ಲಿ ಇದೇ ಜೂ. 1ರಿಂದ 3ರವರೆಗೆ ಹಜರತ್ ರೈಮಾನ ಶಾವಲಿ ಉರುಸನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಗುವುದು.