ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್, ತಮ್ಮ ಹೊಸ ಚಿತ್ರ ‘ಡೆವಿಲ್’ ಶೂಟಿಂಗ್ ನಿಮಿತ್ತ ವಿದೇಶ ಪ್ರವಾಸದ ದಿನಾಂಕ ಮರುನಿಗದಿಗೆ ಕೋರಿ 57ನೇ ಸೆಷನ್ಸ್ ಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಹಿಂದೆ ಜುಲೈ 1ರಿಂದ 25ರ ವರೆಗೆ ದರ್ಶನ್ ವಿದೇಶ ಪ್ರಯಾಣಕ್ಕೆ ನ್ಯಾಯಾಲಯ ಅನುಮತಿ ನೀಡಿತ್ತು. ಆದರೆ ಇಸ್ರೇಲ್-ಇರಾನ್ ನಡುವಿನ ಯುದ್ಧ ಸನ್ನಿವೇಶದ ಹಿನ್ನೆಲೆಯಲ್ಲಿ, ಶೂಟಿಂಗ್ ಗಾಗಿ ಯೋಜನೆಗೊಂಡಿದ್ದ ದುಬೈ ಪ್ರವಾಸವನ್ನು ಚಿತ್ರತಂಡ ರದ್ದುಪಡಿಸಿದೆ.
ಇದೀಗ ಶೂಟಿಂಗ್ ಸ್ಥಳವಾಗಿ ಥಾಯ್ಲೆಂಡ್ ಆಯ್ಕೆ ಮಾಡಿರುವ ಕಾರಣ, ದರ್ಶನ್ ಪರ ವಕೀಲ ಸುನಿಲ್ ಕುಮಾರ್ ಅವರು, ಜುಲೈ 11 ರಿಂದ 30ರ ವರೆಗೆ ವಿದೇಶ ಪ್ರವಾಸಕ್ಕೆ ಮರುಅನುಮತಿ ನೀಡುವಂತೆ ಕೋರಿದ್ದಾರೆ.
“ಕೋರ್ಟ್ ಈಗಾಗಲೇ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದೆ. ನಾವು ದಿನಾಂಕ ಮತ್ತು ಸ್ಥಳ ಬದಲಾವಣೆಗೆ ಮಾತ್ರ ಮನವಿ ಮಾಡಿದ್ದೇವೆ. ಜುಲೈ 10ರಂದು ದರ್ಶನ್ ಕೋರ್ಟ್‌ಗೆ ಹಾಜರಾಗಲಿದ್ದಾರೆ,” ಎಂದು ವಕೀಲರು ತಿಳಿಸಿದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಮಂಗಳವಾರರಂದು ತೀರ್ಪು ಪ್ರಕಟಿಸಲಿದೆ.