ಬೆಂಗಳೂರು (ಡಿ.08): ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲೂ ತನ್ನ ದಾಂಭಿಕ ಹಾಗೂ ಹಳೆಯ ವರ್ತನೆಯನ್ನು ಮುಂದುವರಿಸಿಕೊಂಡಿದ್ದು, ಇದರ ಪರಿಣಾಮವಾಗಿ ಸೆಲ್‌ನಲ್ಲಿರುವ ಇತರ ಸಹ ಕೈದಿಗಳು ನಿಜಕ್ಕೂ ನರವೇರಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ. ದರ್ಶನ್– ಸಹ ಕೈದಿಗಳನ್ನ ಕಾಲಿನಿಂದ ಒದ್ದು ಎಬ್ಬಿಸುವುದು, ಅವಾಚ್ಯ ಪದಗಳಿಂದ ಬೈಯುವುದು, ಮಲಗಿದ್ದವರ ಮೇಲೆ ದೌರ್ಜನ್ಯ ತೋರಿಸುವುದು ಜೈಲಿನ ದಿನನಿತ್ಯದ ಘಟನೆಯಾಗಿರುವಂತೆ ವರದಿಯಾಗಿದೆ.
ಇತ್ತೀಚೆಗೆ ಜೈಲಿನ ಕೆಲವು ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ, ಆಡಳಿತವು ತೀವ್ರ ಕ್ರಮಕ್ಕೆ ಕೈ ಹಾಕಿದೆ. ಹೊಸ ಮುಖ್ಯ ಸೂಪರಿಂಟೆಂಡೆಂಟ್ ಐಪಿಎಸ್ ಅಧಿಕಾರಿ ಅಂಶು ಕುಮಾರ್ ಅಧಿಕಾರಕ್ಕೆ ಬಂದ ಬಳಿಕ ಜೈಲಿನಲ್ಲಿ ಕಠಿಣ ನಿಯಮಗಳು ಜಾರಿಯಾದವು. ಸೆಲ್ ಹಾಗೂ ಶೌಚಾಲಯವನ್ನು ಕೈದಿಗಳೇ ಸ್ವಚ್ಛಗೊಳಿಸುವುದು ಕಡ್ಡಾಯವಾಗಿದ್ದು, ಈ ಹೊಸ ನಿಯಮಗಳಿಂದಲೇ ದರ್ಶನ್ ತತ್ತರಿಸಿದ್ದು ತಿಳಿದುಬಂದಿದೆ. ಬೇಲ್ ಸಿಗದ ಆತಂಕ, ಜೈಲಿನ ಶಿಸ್ತು, ಜೊತೆಗೆ ಸೆಲ್‌ನಲ್ಲೇ ಗಲಾಟೆಗಳು – ಹೀಗೆ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದೆ.
ದರ್ಶನ್ ಜೊತೆ ಸೆಲ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ಅನುಕುಮಾರ್, ಜಗ್ಗ, ನಾಗರಾಜ್, ಪ್ರದೋಶ್ ಮತ್ತು ಲಕ್ಷ್ಮಣ್ ಇದ್ದಾರೆ. ನಾಗರಾಜ್‌ರನ್ನು ಹೊರತುಪಡಿಸಿ ಉಳಿದ ಆರೋಪಿಗಳ ಮೇಲೆ ದರ್ಶನ್ ಮಾನಸಿಕ ಹಾಗೂ ದೈಹಿಕ ಹಿಂಸೆ ತೋರಿಸುತ್ತಿದ್ದಾರೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ ದರ್ಶನ್ ಮತ್ತು ಜಗ್ಗ ನಡುವೆ ಭಾರೀ ಜಗಳ ಸಂಭವಿಸಿದ್ದು, ಜೈಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಗಲಾಟೆಯನ್ನು ನಿಯಂತ್ರಿಸಿದ್ದಾರೆ.
ವಕೀಲರ ನೇಮಕ ವಿಚಾರದಲ್ಲಿಯೂ ಸೆಲ್‌ನಲ್ಲಿ ನಿರಂತರವಾಗಿ ಜಗಳಗಳು ನಡೆಯುತ್ತಿರುವುದು ತಿಳಿದುಬಂದಿದೆ. ದರ್ಶನ್ ಅವರ “ಟಾರ್ಚರ್” ಅನ್ನು ಇನ್ನೂ ಸಹಿಸಲಾಗದೆ ಅನುಕುಮಾರ್ ಮತ್ತು ಜಗದೀಶ್ (ಜಗ್ಗ) ಇಬ್ಬರೂ ತಮ್ಮನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. “ನಾವು ಇಲ್ಲೇ ಇದ್ದರೆ ಸಾಯುತ್ತೇವೆ… ದರ್ಶನ್‌ನ ಹಿಂಸೆ ತಡೆಯಲಾಗುತ್ತಿಲ್ಲ” ಎಂದು ಅನುಕುಮಾರ್ ಅಳಲನ್ನು ಹೊರಹಾಕಿದ್ದಾರೆ ಎನ್ನಲಾಗಿದೆ.
ಯಾವುದೇ ಅನಾಹುತ ಸಂಭವಿಸದಂತೆ ಜೈಲು ಅಧಿಕಾರಿಗಳು ದರ್ಶನ್ ಸೆಲ್ ಬಳಿ ಹೆಚ್ಚುವರಿ ಸಿಸಿಟಿವಿ ನಿಗಾವ್ಯವಸ್ಥೆ ಅಳವಡಿಸಿ ವಿಶೇಷ ಗಮನ ಹರಿಸುತ್ತಿದ್ದಾರೆ.
ಸ್ಯಾಂಡಲ್‌ವುಡ್‌ನ ಪ್ರಮುಖ ನಟ ಜೈಲಿನಲ್ಲೇ ಸಹ ಕೈದಿಗಳನ್ನು ಕಿರುಕುಳ ನೀಡುತ್ತಿದ್ದಾನೆಂಬ ಸುದ್ದಿ ರಾಜ್ಯದ ರಾಜಕೀಯ ಹಾಗೂ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.



