ಬೆಂಗಳೂರು: ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರ್ಶನ್ ಕಸ್ಟೋಡಿಯಲ್ ಡೆತ್ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ರಿಹ್ಯಾಬ್ ಸೆಂಟರ್‌ಗೆ ಸಂಬಂಧಿಸಿದ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ನವೀನ್, ಅಖಿಲ್, ನಾರಾಯಣ @ ನಾಣಿ, ಹಿತೇಶ್ ಕುಮಾರ್, ಮಂಜು, ಸಾಹಿಲ್ ಅಹಮದ್, ನವೀನ್ ಕುಮಾರ್ ಹಾಗೂ ಮೈಸೂರು ಮೂಲದ ರವಿ ಎಂದು ಗುರುತಿಸಲಾಗಿದೆ. ನವೀನ್ ರಿಹ್ಯಾಬ್ ಸೆಂಟರ್‌ನ ಇನ್‌ಚಾರ್ಜ್ ಆಗಿದ್ದರೆ, ಅಖಿಲ್ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ.
ನಾರಾಯಣ @ ನಾಣಿ ವಿದ್ಯಾರ್ಥಿಯಾಗಿದ್ದು ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ. ಹಿತೇಶ್ ಕುಮಾರ್ ಹಾಗೂ ಮಂಜು ಮೊದಲು ರಿಹ್ಯಾಬ್ ಸೆಂಟರ್‌ಗೆ ಸೇರಿಕೊಂಡು ನಂತರ ಅಡುಗೆ ಕೆಲಸ ನಿರ್ವಹಿಸುತ್ತಿದ್ದರು. ಸಾಹಿಲ್ ಅಹಮದ್, ನವೀನ್ ಕುಮಾರ್ ಮತ್ತು ರವಿ ರಿಹ್ಯಾಬ್ ಸೆಂಟರ್ ಸಿಬ್ಬಂದಿಯಾಗಿದ್ದರು ಎಂದು ಸಿಐಡಿ ತಿಳಿಸಿದೆ.
ಯುವಕ ದರ್ಶನ್ ಗೇಟ್ ಹೊಡೆದು ಹೋಗುತ್ತೇನೆ ಎಂದು ಹೇಳಿದ್ದ ಹಿನ್ನೆಲೆ ಆರೋಪಿಗಳು ಫೈಬರ್ ಲಾಠಿ, ಪ್ಲಾಸ್ಟಿಕ್ ಪೈಪ್ ಬ್ಯಾಟ್ ಮತ್ತು ಮರದ ತುಂಡುಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಾದ ಮೂರು ದಿನಗಳ ಬಳಿಕ ದರ್ಶನ್ ಸಾವನ್ನಪ್ಪಿದ್ದಾನೆ.
ಕಳೆದ ನವೆಂಬರ್ 26ರಂದು ದರ್ಶನ್ ಮೃತಪಟ್ಟಿದ್ದ. ಡೆಲಿವರಿ ಬಾಯ್‌ಗೆ ಹಲ್ಲೆ ಮಾಡಿದ ಆರೋಪದ ಮೇರೆಗೆ ವಿವೇಕನಗರ ಪೊಲೀಸರು ದರ್ಶನ್‌ನನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಪೊಲೀಸರಿಂದಲೂ ಥಳಿತ ನಡೆದಿತ್ತು ಎಂಬ ಆರೋಪಗಳಿವೆ.
ಮೂರು ದಿನಗಳ ಕಾಲ ಅಕ್ರಮವಾಗಿ ಬಂಧನದಲ್ಲಿಟ್ಟ ಬಳಿಕ, ಅಡಕಮಾರನಹಳ್ಳಿಯ ಯುನಿಟಿ ಫೌಂಡೇಶನ್ ಎಂಬ ರಿಹ್ಯಾಬ್ ಸೆಂಟರ್‌ಗೆ ದರ್ಶನ್‌ನನ್ನು ಪೊಲೀಸರು ಸೇರಿಸಿದ್ದರು.
ರಿಹ್ಯಾಬ್ ಸೆಂಟರ್‌ನಲ್ಲಿ ಲೋ ಬಿಪಿಯಿಂದ ಮೃತಪಟ್ಟಿದ್ದಾನೆ ಎಂದು ಹೇಳಲಾಗಿತ್ತು. ಆದರೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮಗನ ಮೃತದೇಹ ಕಂಡ ತಾಯಿ ಆದಿಲಕ್ಷ್ಮಿ ವಿವೇಕನಗರ ಪೊಲೀಸರ ವಿರುದ್ಧ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿವೇಕನಗರ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರನ್ನು ಅಮಾನತು ಮಾಡಲಾಗಿತ್ತು.
ಪರಿಣಾಮವಾಗಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿತ್ತು. ತನಿಖೆ ವೇಳೆ ರಿಹ್ಯಾಬ್ ಸೆಂಟರ್ ಸಿಬ್ಬಂದಿಗಳ ವಿರುದ್ಧ ಸಾಕ್ಷ್ಯ ಸಿಕ್ಕ ಹಿನ್ನೆಲೆಯಲ್ಲಿ ಇದೀಗ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ.



