ನಟರ ಹೆಸರಿನಲ್ಲಿ ಅಭಿಮಾನಿಗಳು ಹಲವು ಭಾರಿ ಅತಿರೇಕದ ವರ್ತನೆಗಳನ್ನು ತೋರಿಸುತ್ತಿರುತ್ತಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಹುಚ್ಚಾಟ ಮೆರೆದಿದ್ದಾರೆ. ದರ್ಶನ್ ಅವರ ಆಪ್ತ ಧನ್ವೀರ್ ಗೌಡ ನಟನೆಯ ‘ವಾಮನ’ ಸಿನಿಮಾದ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದು, ಈ ವೇಳೆ ಚಿತ್ರಮಂದಿರದ ಕುರ್ಚಿ, ಕಿಟಕಿ, ಬಾಗಿಲಿಗೆ ಹಾನಿ ಆಗುವ ರೀತಿಯಲ್ಲಿ ದರ್ಶನ್ ಫ್ಯಾನ್ಸ್ ನಡೆದುಕೊಂಡಿದ್ದಾರೆ. ಈ ಬಗ್ಗೆ ಚಿತ್ರಮಂದಿರದ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದರ್ಶನ್ ಮತ್ತು ಧನ್ವೀರ್ ಗೌಡ ನಡುವೆ ಆಪ್ತತೆ ಇದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾಗ ದರ್ಶನ್ ಜೊತೆ ಗಿದ್ದವರು ನಟ ಧನ್ವೀರ್ ಗೌಡ. ಅಲ್ಲದೆ ದರ್ಶನ್ ಗೆ ಜಾಮೀನು ಕೊಡಿಸಲು ಪ್ರಯತ್ನಿಸಿದವರಲ್ಲಿ ನಟ ಧನ್ವೀರ್ ಗೌಡ ಕೂಡ ಪ್ರಮುಖರಾಗಿದ್ದರು. ಸದ್ಯ ರಿಲೀಸ್ ಆಗಿರುವ ಧನ್ವೀರ್ ನಟನೆಯ ‘ವಾಮನ’ ಸಿನಿಮಾದ ಟ್ರೈಲರ್ ಗೆ ನಟ ದರ್ಶನ್ ಬೆಂಬಲ ನೀಡಿದ್ದಾರೆ. ಆನ್ಲೈನ್ ಮೂಲಕ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದು ಸಿನಿಮಾದ ಟ್ರೈಲರ್ ಅನ್ನು ‘ಪ್ರಸನ್ನ’ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗಿದೆ.
ದರ್ಶನ್ ಆಪ್ತನ ಸಿನಿಮಾ ಆದ್ದರಿಂದ ‘ವಾಮನ’ ಟ್ರೇಲರ್ ಬಿಡುಗಡೆಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಾಕ್ಷಿಯಾದರು. ಪ್ರಸನ್ನ ಚಿತ್ರಮಂದಿರದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳು ದಾಂಧಲೆ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ನೋಡಲು ಬಂದವರು ‘ಪ್ರಸನ್ನ’ ಚಿತ್ರಮಂದಿರದ ವಸ್ತುಗಳನ್ನು ಒಡೆದುಹಾಕಿದ್ದಾರೆ.
ಚಿತ್ರಮಂದಿರದ ಬಾಗಿಲು, ಕಿಟಕಿ, ಕುರ್ಚಿಗಳನ್ನು ದರ್ಶನ್ ಅಭಿಮಾನಿಗಳು ಒಡೆದುಹಾಕಿದ್ದಾರೆ. ಥಿಯೇಟರ್ನ ಸೆಕೆಂಡ್ ಕ್ಲಾಸ್ನಲ್ಲಿರುವ 80 ಸೀಟ್ ಹಾಗೂ ಬಾಲ್ಕನಿಯಲ್ಲಿನ 10 ಸೀಟ್ಗಳನ್ನು ಮುರಿದುಹಾಕಲಾಗಿದೆ. ದರ್ಶನ್ ಫ್ಯಾನ್ಸ್ ನಡೆಗೆ ಪ್ರಸನ್ನ ಥಿಯೇಟರ್ ಸಿಬ್ಬಂದಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.