ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಅವರನ್ನು ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಕ್ವಾರಂಟೈನ್ ಸೆಲ್ ನಲ್ಲಿ ಇರಿಸಿಕೊಂಡಿದ್ದಾರೆ. ಕೋರ್ಟ್ ನೀಡಿದ ಆದೇಶದ ಮೇರೆಗೆ, ಕೆಲವು ಅಗತ್ಯ ಸೌಲಭ್ಯಗಳು ನೀಡಬೇಕೆಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಆದರೂ, ಜೈಲು ಅಧಿಕಾರಿಗಳು ಆ ಸವಲತ್ತುಗಳನ್ನು ಒದಗಿಸಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಮತ್ತೆ ಕೋರ್ಟ್ ಗೆ ಹೊಸ ಅರ್ಜಿ ಸಲ್ಲಿಸಲಾಗಿದೆ.
ದರ್ಶನ್ ಪರ ವಕೀಲರಾದ ಸುನಿಲ್ ಅವರು, ಬೆಂಗಳೂರು 57ನೇ ಸಿಸಿಹೆಚ್ ಕೋರ್ಟ್‌ಗೆ ಸಿಆರ್ಪಿಸಿ ಸೆಕ್ಷನ್ 310 ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಮೂಲಕ, “ಜೈಲಿನಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ನ್ಯಾಯಾಲಯದವರು ಸ್ಥಳಕ್ಕೆ ಹೋಗಿ ಖುದ್ದಾಗಿ ಪರಿಶೀಲಿಸಬೇಕು” ಎಂದು ಮನವಿ ಮಾಡಿದ್ದಾರೆ.
ಕೋರ್ಟ್ ಆದೇಶ ನೀಡಿದರೂ, ಜೈಲು ಅಧಿಕಾರಿಗಳು ಕೆಲವು ಅಗತ್ಯ ಸವಲತ್ತುಗಳನ್ನು ನೀಡಿಲ್ಲ. ತಾವು ಎಲ್ಲ ಸವಲತ್ತುಗಳನ್ನು ನೀಡಿದ್ದೇವೆ ಎಂದು ಕೋರ್ಟ್‌ಗೆ ಜೈಲು ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ದರ್ಶನ್ ಪರ ವಕೀಲರು ತಿಳಿಸಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಲಾಗಿದೆ.
ಹಿಂದೆ ಏನಾಯ್ತು: ದರ್ಶನ್ ಅವರು ಮೊದಲು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ, ಕೆಲವೊಂದು ನಿಯಮ ಉಲ್ಲಂಘನೆಗಳು ನಡೆದಿದ್ದರಿಂದ, ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಯಿತು. ನಂತರ ಜಾಮೀನು ಪಡೆದು ಹೊರ ಬಂದಿದ್ದರು. ಆದ್ರೆ ಸುಪ್ರೀಂ ಕೋರ್ಟ್ ದರ್ಶನ್ ಹಾಗೂ ಪ್ರಕರಣದ ಉಳಿದ ಆರೋಪಿಗಳಿಗೆ ನೀಡಿದ್ದ ಜಾಮೀನನ್ನು ರದ್ದು ಮಾಡಿತು. ಹೀಗಾಗಿ ಮತ್ತೆ ಅವರನ್ನು ಪರಪ್ಪನ ಅಗ್ರಹಾರಕ್ಕೆ ಕಳಿಸಲಾಯಿತು.
ಈಗ ಅವರನ್ನು ಕಟ್ಟುನಿಟ್ಟಾದ ನಿಯಮಗಳ ನಡುವೆ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದ್ದು, ಯಾವುದೇ ವೈಐಪಿ ಸವಲತ್ತುಗಳನ್ನು ನೀಡದಂತೆ ಕ್ರಮ ಕೈಗೊಳ್ಳಲಾಗಿದೆ.
ಇನ್ನೂ ರೇಣುಕಾಸ್ವಾಮಿ ಕೊಲೆ ಪ್ರಕರಣ ದೇಶದ ಮಟ್ಟದಲ್ಲಿ ಅತ್ಯಂತ ಪ್ರಮುಖವಾದ ಪ್ರಕರಣಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಪ್ರಥಮ ಸ್ಥಾನದಲ್ಲಿ ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವಿದೆ.