ನಟ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಚಿತ್ರವನ್ನು ನಿರ್ದೇಶಕ ಪ್ರಕಾಶ್ ವೀರ್ ನಿರ್ದೇಶಿಸಿದ್ದು, ದರ್ಶನ್ ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಡಿ ಕಂಪನಿ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನವನ್ನು ‘ಡೆವಿಲ್’ ಚಿತ್ರದ ನಾಯಕಿ ರಚನಾ ರೈ ನಡೆಸಿರುವುದು ವಿಶೇಷ.
ವಿಜಯಲಕ್ಷ್ಮೀ ಅವರು ‘ಡೆವಿಲ್’ ಸಿನಿಮಾಗೆ ಮೊದಲ ದಿನ ಮೊದಲ ಶೋ ವೀಕ್ಷಣೆ ಮಾಡಲು ಬೆಂಗಳೂರಿನ ಗಾಂಧಿನಗರದಲ್ಲಿರುವ ನರ್ತಕಿ ಚಿತ್ರಮಂದಿರಕ್ಕೆ ತೆರಳಿದ್ದರು. ಈ ವೇಳೆ ಅಭಿಮಾನಿಗಳು ತೋರಿದ ಭರ್ಜರಿ ಸಂಭ್ರಮ ನೋಡಿ ಖುಷಿಯಾದ ಅವರು, ಆ ವಿಷಯವನ್ನು ದರ್ಶನ್ ಅವರಿಗೆ ತಿಳಿಸಿದ್ದಾರೆ.
ವಾರದಲ್ಲಿ ಎರಡು ದಿನ ಜೈಲಿನ ಲ್ಯಾಂಡ್ಲೈನ್ ಮೂಲಕ ಕರೆ ಮಾಡಲು ಅವಕಾಶ ಇರುವುದಾಗಿ ಹೇಳಿರುವ ವಿಜಯಲಕ್ಷ್ಮೀ, ‘ಡೆವಿಲ್’ ರಿಲೀಸ್ ಆದ ದಿನವೇ ದರ್ಶನ್ ಕರೆ ಮಾಡಿ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಬಗ್ಗೆ ವಿಚಾರಿಸಿದ್ದಾಗಿ ತಿಳಿಸಿದ್ದಾರೆ. ಸಿನಿಮಾ ಹೇಗಿದೆ, ಜನರ ಅಭಿಪ್ರಾಯ ಏನು ಎಂಬುದನ್ನು ವಿವರವಾಗಿ ಅವರಿಗೆ ತಿಳಿಸಿದ್ದಾಗಿ ಹೇಳಿದ್ದಾರೆ.
ನಾನಾ ಜಿಲ್ಲೆಗಳಲ್ಲಿ ‘ಡೆವಿಲ್’ ರಿಲೀಸ್ ಆಗಿದ್ದು, ಅಭಿಮಾನಿಗಳು ಕಟೌಟ್ಗಳನ್ನು ಅಳವಡಿಸಿ ಸಂಭ್ರಮಿಸಿದ್ದಾರೆ. ಈ ಸಂಭ್ರಮ ಸಂಪೂರ್ಣವಾಗಿ ಅಭಿಮಾನಿಗಳ ಸ್ವಂತ ಹಣದಲ್ಲಿ ನಡೆದಿದ್ದು, ಇದಕ್ಕಾಗಿ ದರ್ಶನ್ ಅಥವಾ ತಾವೇ ಯಾರಿಗೂ ಹೇಳಿಲ್ಲ ಎಂದು ವಿಜಯಲಕ್ಷ್ಮೀ ಸ್ಪಷ್ಟಪಡಿಸಿದ್ದಾರೆ.



