ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಆರಂಭವಾಗಿರುವ ನಡುವೆಯೇ, ಆರೋಪಿಗಳಾದ ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಅಂತರ ಹೆಚ್ಚಾಗಿದೆ ಎಂಬ ಮಾಹಿತಿ ಹೊರಬಂದಿದೆ. ಇಬ್ಬರೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರೂ, ಜೈಲು ಸೇರಿದ ಬಳಿಕ ಅವರಿಬ್ಬರ ನಡುವೆ ಯಾವುದೇ ಸಂವಹನ ನಡೆದಿಲ್ಲ.
ದರ್ಶನ್ ಅವರನ್ನು ಭೇಟಿಯಾಗಿ ಮಾತನಾಡಬೇಕು ಎಂಬ ಆಸೆ ಪವಿತ್ರಾ ಗೌಡ ಹೊಂದಿದ್ದಾರೆ. ಈ ಸಂಬಂಧ ಅವರು ಜೈಲು ಅಧಿಕಾರಿಗಳ ಮೂಲಕ ಹಲವು ಬಾರಿ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಡಿಜಿಪಿ ಅಲೋಕ್ ಕುಮಾರ್ ಜೈಲಿಗೆ ಭೇಟಿ ನೀಡಿದ್ದ ವೇಳೆ ಕೂಡ ಪವಿತ್ರಾ ಗೌಡ ಈ ಮನವಿ ಸಲ್ಲಿಸಿದ್ದರು. ಆದರೆ, ಈ ಬೇಡಿಕೆಗೆ ದರ್ಶನ್ ಕಡೆಯಿಂದ ಯಾವುದೇ ಸಹಕಾರ ಸಿಗುತ್ತಿಲ್ಲ.
ಮೂಲಗಳ ಪ್ರಕಾರ, ಪವಿತ್ರಾ ಗೌಡ ಅವರನ್ನು ಭೇಟಿಯಾಗಲು ದರ್ಶನ್ ನಯವಾಗಿಯೇ ನಿರಾಕರಿಸಿದ್ದಾರೆ. “ಈ ಪರಿಸ್ಥಿತಿಗೆ ಕಾರಣವಾದವರ ಜೊತೆ ಮಾತಿಲ್ಲ” ಎಂಬ ಧೋರಣೆಯಲ್ಲೇ ದರ್ಶನ್ ನಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಜೈಲಿನಲ್ಲಿ ಭೇಟಿಯಾದವರಿಗೆ ಅವರು ಕೇವಲ ಕಾನೂನು ಪ್ರಕ್ರಿಯೆ ಮತ್ತು ತಮ್ಮ ರಕ್ಷಣಾ ಹೋರಾಟದ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಟ್ರಯಲ್ ಆರಂಭವಾಗಿದ್ದು, ಮೊದಲ ಹಂತದಲ್ಲಿ ಮೃತನ ತಂದೆ-ತಾಯಿಯ ವಿಚಾರಣೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಸಾಕ್ಷಿಗಳ ವಿಚಾರಣೆ ವೇಗ ಪಡೆಯಲಿದ್ದು, ಇಂತಹ ಸಂದರ್ಭದಲ್ಲಿ ದರ್ಶನ್ ಜೊತೆ ಮಾತನಾಡುವ ಪವಿತ್ರಾ ಗೌಡ ಅವರ ಆಸೆಗೆ ತಣ್ಣೀರು ಬಿದ್ದಂತಾಗಿದೆ.
ಒಂದೆಡೆ, ಕೊಲೆ ಪ್ರಕರಣಕ್ಕೆ ಮುನ್ನ ದರ್ಶನ್ ಮತ್ತು ಪವಿತ್ರಾ ಗೌಡ ತುಂಬಾ ಆಪ್ತರಾಗಿದ್ದರು ಎಂಬುದಕ್ಕೆ ಅವರ ಅನೇಕ ಫೋಟೋ ಮತ್ತು ವಿಡಿಯೋಗಳು ಸಾಕ್ಷಿಯಾಗಿವೆ. ಆದರೆ, ಒಂದೇ ಪ್ರಕರಣ ಅವರಿಬ್ಬರ ಬದುಕಿನ ದಿಕ್ಕನ್ನೇ ಬದಲಿಸಿದ್ದು, ಈಗ ಇಬ್ಬರೂ ಜೈಲಿನೊಳಗೆ ದೂರ ದೂರವಾಗಿರುವ ಸ್ಥಿತಿ ನಿರ್ಮಾಣವಾಗಿದೆ.



