ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದೆ. ಹೈಕೋರ್ಟ್ ನೀಡಿದ ತೀರ್ಪನ್ನು ಅಲ್ಲಗೆಳೆದ ಸುಪ್ರೀಂ ಕೋರ್ಟ್ ಏಳು ಮಂದಿಯನ್ನು ಮತ್ತೆ ಜೈಲಿಗೆ ಕಳುಹಿಸಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿರುವ ಆರೋಪಿಗಳಿಗೆ ಇಂದು ಕೈದಿ ನಂಬರ್ ಅನ್ನು ನೀಡಲಾಗಿದೆ.
ಆರೋಪಿ ದರ್ಶನ್ ವಿಚಾರಣಾಧೀನ ಕೈದಿ ನಂಬರ್ 7314, ಪವಿತ್ರಾ ಗೌಡ ಕೈದಿ ನಂಬರ್ 7313, ನಾಗರಾಜ್ ಕೈದಿ ನಂಬರ್ 7315, ಲಕ್ಷಣ್ ಕೈದಿ ನಂಬರ್ 7316, ಪ್ರದೂಷ್ ಕೈದಿ ನಂಬರ್ 7317 ಎನ್ನುವ ನಂಬರ್ಗಳನ್ನು ನೀಡಲಾಗಿದೆ.
ದರ್ಶನ್ & ಗ್ಯಾಂಗ್ ಮತ್ತೆ ಜೈಲು ಸೇರುತ್ತಿದ್ದಂತೆ ಎಡಿಜಿಪಿ ಬಿ.ದಯಾನಂದ್ ಜೈಲಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಬಿ.ದಯಾನಂದ್, ಸದ್ಯ ಕಾರಾಗೃಹ ಇಲಾಖೆ ಎಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ದರ್ಶನ್ ಸೇರಿ ಇತರೆ ಆರೋಪಿಗಳಿಗೆ ವಿಶೇಷ ಸವಲತ್ತು ಸಿಗಬಾರದು ಎಂದು ಖಡಕ್ ಆಗಿ ಸೂಚನೆ ನೀಡಿದ್ದಾರೆ. ಈ ಹಿಂದೆ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದು ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಹೀಗಾಗಿ ಈ ಬಾರಿ ಎಚ್ಚರಿಕೆ ಕೈಗೊಂಡಿರುವ ಪೊಲೀಸರು ಈ ಬಾರಿ ಯಾವುದೆ ಸೌಲತ್ತು ನೀಡದೆ ಇರಲು ನಿರ್ಧರಿಸಿದ್ದಾರೆ.
ಇನ್ನೂ ಜೈಲು ಸೇರುತ್ತಿದ್ದಂತೆ ದರ್ಶನ್ ಗೆ ಮತ್ತೆ ಬೆನ್ನು ನೋವಿನ ಸಮಸ್ಯೆ ಶುರುವಾಗಿದೆ. ಈ ಬಗ್ಗೆ ಜೈಲು ಅಧಿಕಾರಿಗಳ ಜೊತೆ ದರ್ಶನ್ ಅಳಲು ತೋಡಿಕೊಂಡಿದ್ದಾರೆ. ಪರಪ್ಪನ ಅಗ್ರಹಾರದ ಜೈಲಿನ ಅಡ್ಮಿಷನ್ನ ಒಂದೇ ಬ್ಯಾರಕ್ನಲ್ಲಿ ದರ್ಶನ್, ನಾಗರಾಜ್, ಲಕ್ಷ್ಮಣ್, ಪ್ರದೂಶ್ ಸೇರಿ ಎಲ್ಲ ಆರೋಪಿಗಳನ್ನು ಇರಿಸಲಾಗಿದೆ.