ದರ್ಶನ್‌ ಜಾಮೀನು ರದ್ದು ಕೋರಿ ಅರ್ಜಿ: ಏಪ್ರಿಲ್ 22ಕ್ಕೆ ವಿಚಾರಣೆ ಮುಂದೂಡಿಕೆ

0
Spread the love

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್‌ ಸೇರಿ ೧೭ ಮಂದಿಗೆ ಈಗಾಗಲೇ ಜಾಮೀನು ಮಂಜೂರಾಗಿದೆ. ಇದೀಗ ರಾಜ್ಯ ಪೊಲೀಸ್ ಇಲಾಖೆಯು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಕೆಲ ಆರೋಪಿಗಳ ಜಾಮೀನು ರದ್ದು ಮಾಡಬೇಕೆಂದು ಕೋರಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಏಪ್ರಿಲ್ 22ಕ್ಕೆ ಮುಂದೂಡಲ್ಪಟ್ಟಿದೆ.

Advertisement

ನಟ ದರ್ಶನ್ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ಇಂದು ಸುಪ್ರೀಂಕೋರ್ಟ್​ನಲ್ಲಿ ನಡೆದಿದ್ದು, ರಾಜ್ಯದ ಪರವಾಗಿ ವಕೀಲ ಸಿದ್ಧಾರ್ಥ್ ಲೂಥ್ರಾ ಅವರು ಅರ್ಜಿಯ ಉಲ್ಲೇಖ ಮಾಡಿದರು. ಬಳಿಕ ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿದರು. ಮುಂದಿನ ವಿಚಾರಣೆ ಏಪ್ರಿಲ್ 22ಕ್ಕೆ ನಡೆಯಲಿದ್ದು, ಸುಪ್ರೀಂಕೋರ್ಟ್​ನಲ್ಲಿಯೂ ದರ್ಶನ್ ಪರವಾಗಿ ವಕೀಲ ನಾಗೇಶ್ ವಕಾಲತ್ತು ವಹಿಸುವ ಸಾಧ್ಯತೆ ಇದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಡಿಸೆಂಬರ್ ತಿಂಗಳಲ್ಲಿ ದರ್ಶನ್, ಪವಿತ್ರಾ ಸೇರಿದಂತೆ ಹಲವು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಅದಕ್ಕೂ ಮುನ್ನ ನಟ ದರ್ಶನ್ ಅವರ ಬೆನ್ನು ನೋವಿನ ಚಿಕಿತ್ಸೆಗಾಗಿ ಏಳು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿತ್ತು. ಹೈಕೋರ್ಟ್​, ದರ್ಶನ್ ಹಾಗೂ ಇತರರಿಗೆ ಜಾಮೀನು ನೀಡಿದ ಬಳಿಕ ರಾಜ್ಯ ಪೊಲೀಸ್ ಇಲಾಖೆ ಗೃಹ ಇಲಾಖೆಯ ಅನುಮತಿ ಪಡೆದುಕೊಂಡು ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದು, ಜಾಮೀನು ರದ್ದು ಮಾಡುವಂತೆ ಕೋರಿದೆ.

ನಟ ದರ್ಶನ್, ಜಾಮೀನು ಪಡೆದ ಬಳಿಕ ಇದೀಗ ಮತ್ತೆ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇತ್ತೀಚೆಗಷ್ಟೆ ನ್ಯಾಯಾಲಯದ ಅನುಮತಿ ಪಡೆದುಕೊಂಡು ರಾಜಸ್ಥಾನಕ್ಕೆ ಸಿನಿಮಾ ಚಿತ್ರೀಕರಣಕ್ಕೆ ಹೋಗಿ ಬಂದರು. ‘ಡೆವಿಲ್’ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ರಾಜಸ್ಥಾನದಲ್ಲಿ ನಡೆಯಿತು. ರಾಜಸ್ಥಾನದಲ್ಲಿ ಚಿತ್ರೀಕರಣ ಮುಗಿಸಿ ಇಂದು (ಏಪ್ರಿಲ್ 02) ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಈ ಮಧ್ಯೆ ದರ್ಶನ್‌ ಮತ್ತೆ ಕೋರ್ಟ್‌ ಗೆ ಅಲೆಯುವಂತಾಗಿರೋದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.

 


Spread the love

LEAVE A REPLY

Please enter your comment!
Please enter your name here