ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿಯಾಗಿರುವ ದರ್ಶನ್ ಸೇರಿದಂತೆ ಪ್ರಕರಣದ ಅಷ್ಟೂ ಮಂದಿ ಆರೋಪಿಗಳಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಹೈಕೋರ್ಟ್ ನೀಡಿರುವ ಜಾಮೀನು ಕುರಿತು ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ದರ್ಶನ್ ಗೆ ನೀಡಿರುವ ಜಾಮೀನನ್ನು ಪ್ರಶ್ನೆ ಮಾಡಿದ್ದಾರೆ. ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನು ರದ್ದು ಮಾಡುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಅರ್ಜಿಯ ಅಂತಿಮ ವಿಚಾರಣೆ ಇಂದು (ಜುಲೈ 22) ನಡೆಯಬೇಕಿತ್ತು. ದರ್ಶನ್ ಪರ ವಾದ ಮಾಡುತ್ತಿದ್ದ ಕಪಿಲ್ ಸಿಬಲ್ ವಾದ ಮಂಡಿಸಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಕೋರ್ಟ್‌ಗೆ ಕಪಿಲ್ ಸಿಬಲ್ ಗೈರಾಗಿದ್ದು ಅವರ ಪರ ಬೇರೆ ವಕೀಲರು ವಾದ ಮಂಡಿಸಿದ್ದಾರೆ.
ಇಂದು ದರ್ಶನ್ ಗೆ ನಿರ್ಣಾಯಕ ನಿಧ ಎಂದೇ ಹೇಳಲಾಗಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಯಾವ ರೀತಿ ನೀಡುತ್ತೇ ಅನ್ನೋ ಕುತೂಹಲ ಇತ್ತು. ಆದ್ರೆ ದರ್ಶನ್ ಪರ ವಾದ ಮಂಡಿಸಬೇಕಿದ್ದ ಖ್ಯಾತ ವಕೀಲ ಕಪಿಲ್ ಸಿಬಲ್ ಗೈರು ಹಾಜರಾಗಿದ್ದರಿಂದ ದರ್ಶನ್ ಪರ ಸಿದ್ಧಾರ್ಥ್ ದವೆ ವಾದವನ್ನು ಮಂಡಿಸಿದ್ದಾರೆ. ಹೀಗಾಗಿ ವಿಚಾರಣೆ ಮತ್ತೆ ಮುಂದೂಡಲಾಗಿದೆ.
ಇಂದು ದರ್ಶನ್ ಪರ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ್ದ ವಕೀಲ ಸಿದ್ಧಾರ್ಥ್ ದವೆ ನ್ಯಾಯಾಧೀಶರ ಮುಂದೆ ಕಾಲಾವಕಾಶ ಕೋರಿದ್ದಾರೆ. ಕೇಸ್ ಅನ್ನು ಅಧ್ಯಯನ ಮಾಡುವುದಕ್ಕೆ ಕಾಲಾವಕಾಶ ಬೇಕು ಎಂದು ಸಿದ್ದಾರ್ಥ್ ಮನವಿ ಮಾಡಿದ್ದು, ಹೀಗಾಗಿ ಕೇವಲ ಎರಡು ದಿನಗಳ ಕಾಲಾವಕಾಶ ನೀಡಲಾಗಿದೆ. ಹಾಗೇ ಲಿಖಿತ ರೂಪದಲ್ಲಿ ವಾದ ಮಂಡಿಸುವುದಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ.