ಬೆಂಗಳೂರು: ಸೆಪ್ಟೆಂಬರ್ 20ರಿಂದ ಶಾಲಾ ಮಕ್ಕಳಿಗೆ ದಸರಾ ರಜೆ ನೀಡಲಾಗಿದೆ. ಅಕ್ಟೋಬರ್ 7 ರವರೆಗೆ ಬಹುತೇಕ ಶಾಲೆಗಳು ಮಕ್ಕಳಿಗೆ ದಸರಾ ರಜೆ ಘೋಷಣೆ ಮಾಡಿದ್ದಾರೆ. ಆದರೆ ಇದೀಗ ಮತ್ತಷ್ಟು ದಸರಾ ರಜಾ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಹೌದು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ದಿನಾಂಕ ವಿಸ್ತರಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಸಲಾಯಿತು. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಯಿತು. ಸಮೀಕ್ಷೆ ಹಿನ್ನೆಲೆ ರಾಜ್ಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ರಜೆ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ.
ದಸರಾ ರಜೆಯಲ್ಲಿರುವ ಮಕ್ಕಳಿಗೆ ಹೆಚ್ಚುವರಿಯಾಗಿ ಇನ್ನೂ 10 ದಿನ ರಜೆ ಸಿಗಲಿದೆ. ಈ ಅವಧಿಯಲ್ಲಿ ಜಾತಿಗಣತಿ ಸರ್ವೇ ಮುಗಿಸಲು ಸರ್ಕಾರ ಯೋಜಿಸಿದೆ. ಖಾಸಗಿ ಶಾಲೆಗಳಿಗೆ ರಜೆ ಅನ್ವಯಿಸುವುದಿಲ್ಲ. ದ್ವಿತೀಯ ಪಿಯುಸಿ ಉಪನ್ಯಾಸಕರಿಗೆ ಸರ್ವೆಯಿಂದ ವಿನಾಯಿತಿ ನೀಡಲಾಗಿದೆ. ದಸರಾ ಹಬ್ಬದ ವೇಳೆ ಗಣತಿಗೆ ಹಿನ್ನಡೆಯಾಗಿದೆ. ದಿನದ ಟಾರ್ಗೆಟ್ ರೀಚ್ ಆಗೋಕೆ ಸಾಧ್ಯ ಆಗಿಲ್ಲ. 11 ರಿಂದ 14 ಲಕ್ಷ ಮನೆಗಳ ಟಾರ್ಗೆಟ್ ಇತ್ತು. ಆಯುಧ ಪೂಜೆ ಮತ್ತು ವಿಜಯದಶಮಿ ವೇಳೆ ಗಣತಿ ಕುಂಠಿತವಾಗಿದೆ.
ಈವರೆಗೆ 1.15 ಕೋಟಿ ಮನೆಗಳ ಸಮೀಕ್ಷೆ ಆಗಿದೆ. ಇನ್ನೂ 30 ಲಕ್ಷ ಸಮೀಕ್ಷೆ ಬಾಕಿ ಇದೆ. ಅದಕ್ಕಾಗಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ರಜೆಯ ದಿನಗಳನ್ನು ವಿಶೇಷ ತರಗತಿಗಳ ಮೂಲಕ ಸರಿದೂಗಿಸಲು ಸರ್ಕಾರ ಕ್ರಮಕೈಗೊಂಡಿದೆ. ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷರು, ಸಿಎಸ್ ಶಾಲಿನಿ ರಜನೀಶ್ ಸೇರಿ ಹಲವರು ಭಾಗಿಯಾಗಿದ್ದರು.