ದಾವಣಗೆರೆ:- ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿ ಮಹಿಳಾ ಟೆಕ್ಕಿಯೊಬ್ಬರಿಗೆ 93 ಲಕ್ಷ ರೂ. ವಂಚಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ನಗರದ ಸಿದ್ದವೀರಪ್ಪ ಬಡಾವಣೆಯ 38 ವರ್ಷದ ಮಹಿಳಾ ಟೆಕ್ಕಿಗೆ ಈ ವಂಚನೆ ನಡೆದಿದೆ. ‘ವಿಐಪಿ ರುದ್ರಾ ಷೇರ್ಸ್’ ಎಂಬ ಹೆಸರಿನ ವಾಟ್ಸಾಪ್ ಗ್ರೂಪ್ನಲ್ಲಿ ಬಂದ ಸಂದೇಶವನ್ನು ನಂಬಿ ಅವರು ಹೂಡಿಕೆ ಮಾಡಲು ಮುಂದಾಗಿದ್ದಾರೆ. ಆರಂಭದಲ್ಲಿ ಲಾಭ ಸಿಗುತ್ತದೆ ಎಂಬ ಭರವಸೆಯಿಂದ ಹಂತ ಹಂತವಾಗಿ ಒಟ್ಟು 93 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದಾರೆ.
ಆದರೆ ನಂತರ ಲಾಭಾಂಶ ಮಾತ್ರವಲ್ಲದೆ, ಹೂಡಿಕೆ ಮಾಡಿದ ಮೂಲಧನವೂ ವಾಪಸ್ ಬರದಿದ್ದಾಗ ತಮಗೆ ವಂಚನೆ ಆಗಿರುವುದು ಮಹಿಳೆಗೆ ಅರಿವಾಗಿದೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



