ವಿಜಯಸಾಕ್ಷಿ ಸುದ್ದಿ, ಗದಗ : ಪ್ರಸ್ತುತ ದಿನಮಾನದಲ್ಲಿ ದಿನಾಚರಣೆಗಳು ಫೋಟೋ, ಪೂಜೆ, ಭಾಷಣಗಳಿಗೆ ಸೀಮಿತವಾದಂತಾಗಿವೆ. ದಿನಾಚರಣೆಗಳು ಜನತೆಯಲ್ಲಿ ಹೊಸತನ ತರಬೇಕು, ಜನಜಾಗೃತಿ ಮೂಡಿಸಬೇಕು.
ಈ ನಿಟ್ಟಿನಲ್ಲಿ ಜನೋಪಯೋಗಿ ಕಾರ್ಯ ಚಟುವಟಿಕೆಗಳ ಮೂಲಕ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಬೇಕೆಂದು ಪತಂಜಲಿ ಯೋಗ ಸಮಿತಿಯ ಗದಗ ಜಿಲ್ಲಾಧ್ಯಕ್ಷ ಎಂ. ಗಿರಿಯಪ್ಪ ಕರೆ ನೀಡಿದರು.
ಗದಗ ಜಿಲ್ಲಾ ಯೋಗ ಒಕ್ಕೂಟವು ಜಿಲ್ಲೆಯ ವಿವಿಧ ಯೋಗ ಸಂಘಟನೆಗಳೊಂದಿಗೆ ಬರುವ ಜೂನ್ 21ರಂದು ಆಯೋಜಿಸಲಿರುವ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುರಿತು ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಪತಂಜಲಿ ಯೋಗ ಸಮಿತಿ, ಗದಗ ಜಿಲ್ಲಾ ಅಮೆಚೂರ್ ಯೋಗಾಸನ ಕ್ರೀಡಾ ಸಂಸ್ಥೆ, ನಿತ್ಯಂ ಯೋಗ ಕೇಂದ್ರ, ಬಸವ ಯೋಗ ಕೇಂದ್ರ, ಶ್ರೀ ಕುಮಾರೇಶ್ವರ ಯೋಗ ಜಿಮ್ ಇನ್ನಿತರೆ ಯೋಗ ಸಂಘಟನೆಗಳು ಮತ್ತು ವಿವಿಧ ಯೋಗ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಸದಸ್ಯರಾದ ಡಾ. ಎಸ್.ಕೆ. ನಾಲತ್ವಾಡಮಠ, ಎಂ.ಸಿ. ಮಠದ, ಕೆ.ಎಸ್. ಗುಗ್ಗರಿ, ಅಶೋಕ ಕೊಡಗಲಿ, ಚೇತನ ಚುಂಚಾ, ಪ್ರಮೋದ ಬೇಲಿ, ಮಂಜುಳಾ ಬುಳ್ಳಾ, ವಿಜಯಾ ಚೆನ್ನಶೆಟ್ಟಿ, ಸುಧಾ ಪಾಟೀಲ, ಲಲಿತಾ ಕಡಗದ ಭಾಗವಹಿಸಿ ಯೋಗ ದಿನಾಚರಣೆ ಕುರಿತು ತಮ್ಮ ಸಲಹೆ-ಸೂಚನೆ ತಿಳಿಸಿದರು.
ಈ ವರ್ಷ ಯೋಗ ದಿನಾಚರಣೆಯನ್ನು ಈ ಮೊದಲು ಆಚರಿಸಿದಂತೆ ಭೀಷ್ಮ ಕೆರೆಯ ಬಸವೇಶ್ವರ ಪುತ್ಥಳಿ ಆವರಣದಲ್ಲಿ ಇಲ್ಲವೆ ತೋಂಟದಾರ್ಯ ಮಠದ ಆವರಣದಲ್ಲಿನ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ಆಚರಿಸಲು ನಿರ್ಧರಿಸಲಾಯಿತು.
ಸುನಂದಾ ಜ್ಯಾನೋಪಂತರ ಯೋಗ ಗೀತೆ ಹಾಡಿದರು. ಸುಮಂಗಲಾ ಹದ್ಲಿ ಸ್ವಾಗತಿಸಿದರು. ಗದಗ ಜಿಲ್ಲಾ ಯೋಗ ಒಕ್ಕೂಟದ ಕಾರ್ಯದರ್ಶಿ ಕೆ.ಎಸ್. ಪಲ್ಲೇದ ಪ್ರಾಸ್ತಾವಿಕ ನುಡಿ ತಿಳಿಸಿದರು. ಕೆ.ಎಸ್. ಗುಗ್ಗರಿ ವಂದಿಸಿದರು.