HomeGadag Newsಸರಕಾರದ ಆದೇಶ ದಿಕ್ಕಿರಿಸಿ ಅಪಮಾನ ಮಾಡಿದ್ದ ತಹಸೀಲ್ದಾರ್..! ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ; ನಿರ್ಲಕ್ಷ್ಯ ತೋರಿದ...

ಸರಕಾರದ ಆದೇಶ ದಿಕ್ಕಿರಿಸಿ ಅಪಮಾನ ಮಾಡಿದ್ದ ತಹಸೀಲ್ದಾರ್..! ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ; ನಿರ್ಲಕ್ಷ್ಯ ತೋರಿದ ತಹಸೀಲ್ದಾರ್‌ಗೆ ಕಡ್ಡಾಯ ರಜೆ..!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರ ಚೆನ್ನಮ್ಮಳ ಜಯಂತ್ಯುತ್ಸವವನ್ನು ನಿರ್ಲಕ್ಷಿಸಿ ಅಪಮಾನ ಮಾಡಿದ ತಹಸೀಲ್ದಾರರನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಗುರುವಾರ ಲಕ್ಷೆಮಶ್ವರ ತಹಸೀಲ್ದಾರ ಕಚೇರಿಯ ಎದುರು ಪಂಚಮಸಾಲಿ ಸಮಾಜ ಬಾಂಧವರು ವಿವಿಧ ಸಂಘಟನೆ ಮತ್ತು ಸಮಾಜದವರೊಡಗೂಡಿ ಆರಂಭಿಸಿದ್ದ ಪ್ರತಿಭಟನೆ, ಅಹೋರಾತ್ರಿ ಧರಣಿ ಶುಕ್ರವಾರ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆ, ಭರವಸೆಗಳೊಂದಿಗೆ ಮುಕ್ತಾಯಗೊಂಡಿತು.

ತಹಸೀಲ್ದಾರರು ಚೆನ್ನಮ್ಮನ ಜಯಂತಿ ಆಚರಣೆಯ ಪೂರ್ವಭಾವಿ ಸಭೆ ಮಾಡದೆ, ಸ್ಥಳೀಯವಾಗಿಯೇ ಇದ್ದರೂ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಸರ್ಕಾರದ ಆದೇಶ ಧಿಕ್ಕರಿಸಿ ಅಪಮಾನ ಮಾಡಿದ್ದಾರೆ. ಕೂಡಲೇ ಅವರನ್ನು ಅಮಾನತ್ತು ಮಾಡಬೇಕು ಎಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಕ್ಷಣಾ ವೇದಿಕೆ, ಕರವೇ ಸ್ವಾಭಿಮಾನಿ ಸೇನೆ, ಶ್ರೀರಾಮಸೇನೆ, ಸಂಗೊಳ್ಳಿ ರಾಯಣ್ಣ ವೇದಿಕೆ ಸೇರಿ ವಿವಿಧ ಸಮಾಜ ಮತ್ತು ಸಂಘಟನೆಯವರು, ಮಹಿಳೆಯರೂ ಸಾಥ್ ನೀಡಿದರು.

ಶುಕ್ರವಾರ ಬೆಳಿಗ್ಗೆ ಧರಣಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ ಅವರು ನಡೆದ ಘಟನೆಯ ಸಂಪೂರ್ಣ ಮಾಹಿತಿ ಪಡೆದರು. ಈ ವೇಳೆ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟಗಾರ್ತಿ, ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟದ ಪೂರ್ವದಲ್ಲಿಯೇ (1824) ಬ್ರಿಟೀಷರ ವಿರುದ್ಧ ಹೋರಾಡಿ ಸ್ವತಂತ್ರ ಭಾರತದ ಬೆಳ್ಳಿಚುಕ್ಕಿ ಎನಿಸಿಕೊಂಡಿದ್ದಾರೆ. ಚೆನ್ನಮ್ಮಾಜಿ ಯಾವುದೇ ಒಂದು ಜಾತಿ ಜನಾಂಗಕ್ಕೆ ಸೀಮಿತವಲ್ಲ. ಈ ನಿಟ್ಟಿನಲ್ಲಿ ತಹಸೀಲ್ದಾರರ ನಿರ್ಲಕ್ಷ್ಯ ಮೇಲ್ನೋಟಕ್ಕೆ ಸಾಬೀತಾಗಿದೆ. ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಬರೆಯಲಾಗುವುದು ಮತ್ತು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಶಿರಹಟ್ಟಿ ತಹಸೀಲ್ದಾರರಿಗೆ ಹೆಚ್ಚುವರಿ ಪ್ರಭಾರ ವಹಿಸಲಾಗುವುದು. ತಹಸೀಲ್ದಾರರಿಂದಾದ ನಿರ್ಲಕ್ಷ್ಯಕ್ಕೆ ನಾನು ಕ್ಷಮೆ ಕೇಳುತ್ತಿದ್ದು, ಧರಣಿ ಕೈಬಿಡಿ ಎಂದು ವಿನಂತಿಸಿದರಲ್ಲದೆ, ಸಮಾಜ ಬಾಂಧವರು ತಾಲೂಕು ಮಟ್ಟದ ಚೆನ್ನಮ್ಮ ಜಯಂತಿ ಆಚರಣೆಗೆ ದಿನಾಂಕ ನಿಗದಿಪಡಿಸಿದರೆ ತಪ್ಪದೇ ನಾನೂ ಪಾಲ್ಗೊಳ್ಳುವೆ ಎಂದರು.

ಜಿಲ್ಲಾಧಿಕಾರಿಗಳೇ ಕ್ಷಮೆ ಕೇಳಿದ್ದರಿಂದ ಮತ್ತು ತಹಸೀಲ್ದಾರರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರಿಂದ ಸಮಧಾನಗೊಂಡ ಪ್ರತಿಭಟನಾಕಾರರು ಪರಸ್ಪರ ಮಾತುಕತೆ ನಡೆಸಿ ಪ್ರತಿಭಟನೆಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡರು. ಈ ವೇಳೆ ಮಾತನಾಡಿದ ಮಂಜುನಾಥ ಮಾಗಡಿ, ಇನ್ನು ಮುಂದೆ ಯಾವುದೇ ಮಹಾನ್ ನಾಯಕರ ಜಯಂತಿ ಆಚರಣೆ ವೇಳೆಯೂ ಈ ರೀತಿ ಆಗದಂತೆ ತಹಸೀಲ್ದಾರ, ತಾಲೂಕು ಹಂತದ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ನಿರ್ದೇಶನ ನೀಡಬೇಕು. ಈ ತಹಸೀಲ್ದಾರರಿಗೆ ಗದಗ ಜಿಲ್ಲೆಯಲ್ಲಿ ಸೇವೆಗೆ ಅವಕಾಶ ಕೊಡಬಾರದು ಎಂದರು.

ಚನ್ನಪ್ಪ ಜಗಲಿ ಮಾತನಾಡಿ, ತಹಸೀಲ್ದಾರರ ನಿರ್ಲಕ್ಷ್ಯಕ್ಕೆ ಅವರ ಬದಲಾಗಿ ಕೆಳ ಹಂತದ ಅಧಿಕಾರಿಗಳ ಮೇಲೆ ಮಾಡಿದ ಶಿಸ್ತುಕ್ರಮದ ಆದೇಶ ಗುಬ್ಬಿಯ ಮೇಲೆ ಮಾಡಿದ ಬ್ರಹ್ಮಾಸ್ತ್ರವಾಗುತ್ತದೆ. ಕೂಡಲೇ ಆದೇಶ ವಾಪಸ್ ಪಡೆಬೇಕು ಎಂದು ಮಾಡಿದ ಮನವಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿದರು.

ಈ ವೇಳೆ ಅನ್ನಪೂರ್ಣ ಮಹಾಂತಶೆಟ್ಟರ, ಶಾರದಾ ಮಹಾಂತಶೆಟ್ಟರ, ದೇವೆಂದ್ರಪ್ಪ ಮರಳಿಹಳ್ಳಿ, ವಿರೂಪಾಕ್ಷಪ್ಪ ಅಣ್ಣಿಗೇರಿ, ಶಿವಯ್ಯ ಮಠಪತಿ, ಶರಣು ಗೋಡಿ, ಬಸವರಾಜ ಹೊಗೆಸೊಪ್ಪಿನ, ಮಂಜು ಮುಳಗುಂದ, ಹೊನ್ನಪ್ಪ ವಡ್ಡರ, ಮಂಜುನಾಥ ಗೌರಿ, ಫಕ್ಕಿರೇಶ ಕವಲೂರ, ಪ್ರವೀಣ ಬಾಳಿಕಾಯಿ, ಶಿವನಗೌಡ ಅಡರಕಟ್ಟಿ, ಗುರಪ್ಪ ಮುಳಗುಂದ, ಶಿವಜೋಗೆಪ್ಪ ಚಂದರಗಿ, ಬಸವಣ್ಣೆಪ್ಪ ನಂದೆಣ್ಣವರ, ಎಂ.ಡಿ. ಪಾಟೀಲ, ಮಲ್ಲಿಕಾರ್ಜುನ ನೀರಾಲೂಟಿ, ಪ್ರಕಾಶ ಕಮಡೊಳ್ಳಿ, ಶಂಕರ ಬ್ಯಾಡಗಿ, ಶಿವು ಕಟಗಿ, ಚಂದ್ರು ಮಾಗಡಿ, ಅನ್ನಪೂರ್ಣ ಮೇಟಿ, ಅರುಣಾ ಕಣವಿ ಸೇರಿ ಪಂಚಮಸಾಲಿ ಸಮಾಜ ಬಾಂಧವರು ವಿವಿಧ ಸಮಾಜ ಮತ್ತು ಸಂಘಟನೆಯವರು ಪಾಲ್ಗೊಂಡಿದ್ದರು.

ಗುರುವಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ದುರಗೇಶ ಕೆ.ಆರ್ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಆದ ತಪ್ಪಿಗೆ ತಹಸೀಲ್ದಾರರಿಗೆ ನೊಟೀಸ್ ನೀಡಲಾಗುವುದು ಎಂದು ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಲೆತ್ನಿಸಿದರು. ಘಟನೆಗೆ ಸಂಬಧಿಸಿ ತಹಸೀಲ್ದಾರರಿಗೆ ವರ್ಗಾವಣೆ, ಕೆಳಹಂತಹ ಓರ್ವ ಸಿಬ್ಬಂದಿಗೆ ಅಮಾನತ್ತು, ಇಬ್ಬರಿಗೆ ನೋಟೀಸ್ ಸಹ ನೀಡಲಾಗಿತ್ತು. ಆದರೆ ಅಮಾನತ್ತಿನ ಪಟ್ಟು ಸಡಿಲಿಸದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದು ಧರಣಿ ಮುಂದುವರೆಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!