ವಿಜಯಸಾಕ್ಷಿ ಸುದ್ದಿ, ಧಾರವಾಡ: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಷಿಕ ಪರೀಕ್ಷೆ-1ರ ನಾಲ್ಕನೇ ಪರೀಕ್ಷೆಯಾದ ಸಮಾಜ ವಿಜ್ಞಾನ ಪರೀಕ್ಷೆಯು ಜಿಲ್ಲೆಯಾದ್ಯಂತ ಶನಿವಾರ ಶಾಂತ ರೀತಿಯಿಂದ ಜರುಗಿತು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಶನಿವಾರ ಬೆಳಿಗ್ಗೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ, ವಿದ್ಯಾರ್ಥಿಗಳ ಹಾಜರಾತಿ, ಗೈರು ಮಾಹಿತಿ ಪಡೆದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಧಾರವಾಡ ತಾಲೂಕಿನ ಯರಿಕೊಪ್ಪ, ಕಲಘಟಗಿ ಪಟ್ಟಣದ ಸೇಂಟ್ ಮೇರಿ ಇಂಗ್ಲೀಷ್ ಮಾಧ್ಯಮ ಶಾಲೆ ಮತ್ತು ಜನತಾ ಪ್ರೌಢಶಾಲೆಗಳಲ್ಲಿ ಸ್ಥಾಪಿಸಿರುವ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳು ಪರೀಕ್ಷೆ ಬರೆಯುವದನ್ನು, ಪರೀಕ್ಷಾ ಕೇಂದ್ರದ ಮೂಲಸೌಕರ್ಯ, ಸಿಸಿ ಟಿವಿ ಅಳವಡಿಕೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಪ್ರತಿ ಪರೀಕ್ಷೆಗೆ ನಿರ್ದಿಷ್ಟ ಸಂಖ್ಯೆಯ ಕೆಲವು ವಿದ್ಯಾರ್ಥಿಗಳು ಗೈರಾಗುತ್ತಿದ್ದಾರೆ. ಆಯಾ ಶಾಲೆಯ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಪರೀಕ್ಷೆಗೆ ಗೈರು ಹಾಜರಾಗಿರುವ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ವಾಸ್ತವಿಕ ಕಾರಣ ತಿಳಿದು ತಮಗೆ ವರದಿ ನೀಡಬೇಕೆಂದು ಕಲಘಟಗಿ ಬಿಇಓ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಲಘಟಗಿ ತಾಲೂಕಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳ ಭೇಟಿಯಲ್ಲಿದ್ದಾಗ ಕಲಘಟಗಿ ಪಟ್ಟಣದ ಜನತಾ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಸ್ಪಂದನಾ ಬೋಸ್ಲೆ ಎಂಬ ವಿದ್ಯಾರ್ಥಿನಿ ಎದೆ ನೋವಿನಿಂದ ಅಸ್ವಸ್ಥಳಾಗಿದ್ದಳು. ಸುದ್ದಿ ತಿಳಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ತಕ್ಷಣ ವಿದ್ಯಾರ್ಥಿ ಆರೋಗ್ಯ ಸ್ಥಿತಿ ನೋಡಿಕೊಂಡು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲು ಬಿಇಓ ಮತ್ತು ಕೇಂದ್ರದ ಮುಖ್ಯ ಪರೀಕ್ಷಕರಿಗೆ ನಿರ್ದೇಶಿಸಿದರು.
ತಕ್ಷಣ ಅಗತ್ಯ ಚಿಕಿತ್ಸೆ, ಔಷಧಿ ಸಿಕ್ಕಿದ್ದರಿಂದ ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಸ್ವತಃ ಭೇಟಿ ನೀಡಿ, ಅಗತ್ಯವಾದ ಉತ್ತಮ ಚಿಕಿತ್ಸೆ, ಔಷಧಿ ನೀಡಿ, ಆರೈಕೆ ಮಾಡುವಂತೆ ಮುಖ್ಯ ವೈದ್ಯಾಧಿಕಾರಿ ಡಾ. ಯಶವಂತ ಮದೀನಕರ ಅವರಿಗೆ ಸೂಚಿಸಿದರು. ವಿದ್ಯಾರ್ಥಿನಿಗೆ ಪರೀಕ್ಷೆ ಬಗ್ಗೆ ವಿಚಾರಿಸಿ, ಧೈರ್ಯ ಹೇಳಿದರು. ಅವರ ಮನೆಯಲ್ಲಿ ಆರ್ಥಿಕ, ಕೌಟಂಬಿಕ ಸಮಸ್ಯೆ ಇರುವುದನ್ನು ತಿಳಿದು, ಬಯಸಿದಲ್ಲಿ ವಿದ್ಯಾರ್ಥಿನಿಗೆ ವಿದ್ಯಾರ್ಥಿನಿಲಯ ಕಲ್ಪಿಸುವುದಾಗಿ ಭರವಸೆ ನೀಡಿದರು.
ತಾಲೂಕು ಆಸ್ಪತ್ರೆಯ ಸಿಎಂಓ ಡಾ. ಯಶವಂತ ಮದೀನಕರ ಹಾಗೂ ಫಿಜಿಶಿಯನ್ ಡಾ. ನಿರ್ಮಲಾ ಪುಡಲಕಟ್ಟಿ ಅವರು ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕಲಘಟಗಿ ಪ್ರಭಾರ ತಹಸೀಲ್ದಾರ ಬಸವರಾಜ ಬೆಣ್ಣಿಶಿರೂರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಬಸಾಪುರ ಹಾಗೂ ಶಿಕ್ಷಣಾಧಿಕಾರಿ ರೇಖಾ ಭಜಂತ್ರಿ ಸೇರಿದಂತೆ ಇತರರು ಇದ್ದರು.
ಕಲಘಟಗಿ ತಾಲೂಕಿನಲ್ಲಿ ಒಟ್ಟು 9 ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳಿದ್ದು, ಶನಿವಾರದ ಸಮಾಜ ವಿಜ್ಞಾನ ಪರೀಕ್ಷೆಗೆ ಒಟ್ಟು 2,554 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 1,206 ಗಂಡು ಮಕ್ಕಳು ಹಾಗೂ 1,303 ಹೆಣ್ಣುಮಕ್ಕಳು ಸೇರಿದ್ದು, 45 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.