ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಿಲ್ಲಾ ಪಂಚಾಯತ ಮೂರನೇ ಮಹಡಿಯಲ್ಲಿ ಸ್ಥಾಪಿಸಿರುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಪರೀಕ್ಷಾ ಕೇಂದ್ರ ಹಾಗೂ ಪರೀಕ್ಷಾ ಕೊಠಡಿಗಳ ನೇರ ವೀಕ್ಷಣೆಗೆ ಸ್ಥಾಪಿಸಿರುವ ಜಿಲ್ಲಾ ವೆಬ್‌ಕಾಸ್ಟಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಜಿ.ಪಂ ಸಿಇಓ ಭುವನೇಶ ಪಾಟೀಲ ದಿಢೀರ್ ಭೇಟಿ ನೀಡಿ, ಪರೀಕ್ಷಾ ಕೊಠಡಿಗಳ ಲೈವ್ ಸ್ಟೀಮಿಂಗ್ ವೀಕ್ಷಿಸಿದರು.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ನಿಯಮಾನುಸಾರ ಸುಸೂತ್ರವಾಗಿ ಪರೀಕ್ಷೆಗಳು ನಡೆದಿರುವ ಕುರಿತು ಖಚಿತಪಡಿಸಿಕೊಂಡರು. ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುವಂತೆ ಮುಕ್ತ ವಾತಾವರಣ ಕಲ್ಪಿಸಬೇಕು. ಯಾವುದೇ ರೀತಿಯಲ್ಲಿ ನಕಲು ಆಗದಂತೆ ಎಚ್ಚರಿಕೆ ವಹಿಸಬೇಕು. ವೆಬ್‌ಕಾಸ್ಟಿಂಗ್ ಕೇಂದ್ರದಲ್ಲಿ ನಿರಂತರವಾಗಿ ಪರೀಕ್ಷಾ ಕೇಂದ್ರ ಮತ್ತು ಪರೀಕ್ಷಾ ಕೊಠಡಿಗಳ ಮೇಲೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ವೆಬ್‌ಕಾಸ್ಟಿಂಗ್ ಕೇಂದ್ರದ ಮೇಲುಸ್ತುವಾರಿಗಳಾದ ಜಿ.ಪಂ ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರುಮಠ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಡಿವೈಪಿಸಿ ಎಸ್.ಎಮ್. ಹುಡೆದಮನಿ, ಕೇಂದ್ರದ ನೋಡಲ್ ಅಧಿಕಾರಿ ಪ್ರಭಯ್ಯ ಕೆ.ಚಿಕ್ಕಮಠ ಸೇರಿದಂತೆ ಇತರ ಅಧಿಕಾರಿಗಳು, ವೆಬ್ ಕಾಸ್ಟಿಂಗ್ ಕೇಂದ್ರಕ್ಕೆ ನಿಯೋಜಿತ ಸಿಬ್ಬಂದಿಗಳು ಇದ್ದರು.