ಬೆಂಗಳೂರು:- ಡಿಸಿಗಳು ಪ್ರತಿ ತಿಂಗಳು ಜನಸ್ಪಂದನಾ ಕಾರ್ಯಕ್ರಮ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ಕೊಟ್ಟಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ವಿವಿಧ ಇಲಾಖೆಗಳಡಿ ಅನುಷ್ಠಾನಗೊಂಡಿರುವ ಯೋಜನೆಗಳು ಹಾಗೂ ಕಾಮಗಾರಿಗಳ ಪ್ರಗತಿ ಪರಿಶೀಲನೆಯ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಜೊತೆ ಸಭೆ ನಡೆಸಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ತಿಂಗಳು ಜಿಲ್ಲಾಧಿಕಾರಿಗಳು ಜನಸ್ಪಂದನಾ ಕಾರ್ಯಕ್ರಮ ಮಾಡಬೇಕು. ಶಾಲೆ, ಆಸ್ಪತ್ರೆ, ಅಂಗನವಾಡಿ, ವಸತಿಶಾಲೆ, ರುದ್ರ ಭೂಮಿಗೆ ಸರ್ಕಾರಿ ಜಮೀನು, ನಿವೇಶ ಕೊಡಬೇಕು. ಸರ್ಕಾರಿ ಜಮೀನು ಇಲ್ಲದಿದ್ದರೇ, ಖರೀದಿ ಮಾಡಿ ಕೊಡಬೇಕು. ಇದನ್ನು ಕಡ್ಡಾಯಗೊಳಿಸಲು ಸೂಚಿಸಿದ್ದೇನೆ. ಎಸ್ಸಿ, ಎಸ್ಟಿಗಳಿಗೆ ಸಿಂಧುತ್ವ ಪ್ರಮಾಣ ಪತ್ರ ಒಂದು ತಿಂಗಳೊಳಗೆ ನೀಡಬೇಕು ಎಂದು ಹೇಳಿದ್ದೇನೆ ಎಂದು ಹೇಳಿದರು.
ದ್ವೇಷ ಭಾಷಣದ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಯಾಕೆ ಜಿಲ್ಲೆಗಳಲ್ಲಿ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ? ತಕ್ಷಣ ದೂರು ದಾಖಲಿಸಿ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು. ಇದೇ ರೀತಿ ಸರ್ಕಾರದ ಯೋಜನೆಗಳ ಬಗ್ಗೆ, ಕೈಗೊಂಡಿರುವ ಕ್ರಮಗಳ ಬಗ್ಗೆ ಸುಳ್ಳು ಸುದ್ದಿಗಳನ್ನು, ಮಾಹಿತಿಗಳನ್ನು ಹರಡುವ ಪ್ರಕರಣಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಅಂತ ಸೂಚಿಸಿದ್ದೇನೆ ಎಂದು ತಿಳಿಸಿದರು.
ನಾವು ರಾಜ್ಯವನ್ನು ಮಾದಕ ದ್ರವ್ಯ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಈಗಾಗಲೇ ಘೋಷಿಸಿದ್ದೇವೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಮುಂದುವರೆಸಬೇಕು. ಮಾದಕ ವಸ್ತು ಮಾರಾಟ ಮಾಡುವವರ ಅಂಗಡಿ ಮತ್ತಿತರ ಕೇಂದ್ರಗಳ ಪರವಾನಗಿ ರದ್ದುಗೊಳಿಸುವ ಸಂಬಂಧ ಕಾನೂನು ತಿದ್ದುಪಡಿ ತರುತ್ತೇವೆ ಎಂದು ಹೇಳಿದರು.
2023ರಲ್ಲಿ 6,767 ಪ್ರಕರಣಗಳು, 2024ರಲ್ಲಿ 4,188 ಪ್ರಕರಣಗಳು ದಾಖಲಾಗಿವೆ. ಈ ವರ್ಷ ಇದುವರೆಗೆ 1,793 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಗಳಲ್ಲಿ ಮಾದಕ ದ್ರವ್ಯ ದ೦ಧೆಯನ್ನು ಮಟ್ಟಹಾಕಲು ಡಿಸಿ ಹಾಗೂ ಎಸ್ಪಿ ಅವರು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯಬಿದ್ದರೆ ಇನ್ನಷ್ಟು ಕಠಿಣ ಕಾಯ್ದೆಗಳನ್ನು ಜಾರಿಗೆ ತರಲು ನಾವು ಬದ್ಧರಾಗಿದ್ದೇವೆ. ಶಾಲಾ, ಕಾಲೇಜುಗಳಲ್ಲಿ ಮಾದಕ ದ್ರವ್ಯ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸುವಂತೆ ಸೂಚನೆ ನೀಡಿದ್ದೇನೆ ಎಂದರು.
ಇನ್ನೂ ಇದೇ ವೇಳೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರದ ಆರೂ ದಿನವೂ ಮೊಟ್ಟೆ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಮಕ್ಕಳಿಗೆ ಸಮವಸ್ತ್ರ, ಪುಸ್ತಕ ಎಲ್ಲವನ್ನೂ ಕೊಡುತ್ತಿದ್ದೇವೆ. 1 ರಿಂದ 1.50 ಲಕ್ಷ ವಿದ್ಯಾರ್ಥಿಗಳು ಸಂಖ್ಯೆ ಕಡಿಮೆ ಆಗುತ್ತಿದೆ. 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಸೂಚನೆ ನೀಡಿದ್ದೇನೆ. ಮಂಗಳೂರು, ಉಡುಪಿ, ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಫಲಿತಾಂಶ ಕಡಿಮೆ ಬಂದಿದೆ. ಹೀಗಾಗಿ, 5 ಸಾವಿರ ಕೋಟಿ ರೂಪಾಯಿ ಕೊಡುತ್ತಿದ್ದೇನೆ ಎಂದು ಹೇಳಿದರು.