ವಿಜಯಸಾಕ್ಷಿ ಸುದ್ದಿ, ಗದಗ : ಕಳೆದ 27 ವರ್ಷಗಳಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಡಿಡಿಪಿಐ ಎಂ.ಎ. ರಡ್ಡೇರರು ಜುಲೈ 31ರಂದು ನಿವೃತ್ತಿ ಹೊಂದಲಿದ್ದಾರೆ. ಜಿಲ್ಲೆಯ ಆರಂಭದ ವರ್ಷದಿಂದಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ವಿಷಯ ಪರೀಕ್ಷಕರಾಗಿ ಸೇವೆ ಆರಂಭಿಸಿದ ರಡ್ಡೇರರು ಮುಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ, ಉಪನ್ಯಾಸಕರಾಗಿ ಪ್ರಸ್ತುತ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಲಿದ್ದಾರೆ.
ತಮ್ಮದೇ ಆದ ಚಿಂತನೆಗಳ ಮೂಲಕ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಕ್ರಿಯಾಶೀಲರಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅದರ ಪ್ರತಿಫಲ ಎನ್ನುವಂತೆ 25ನೇ ಸ್ಥಾನದಲ್ಲಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಈ ಬಾರಿ 10ನೇ ಸ್ಥಾನಕ್ಕೆ ಬಂದಿದ್ದು ಅವರ ಶ್ರಮಕ್ಕೆ ಸಾಕ್ಷಿಯಾಗಿದೆ. ಸದಾ ಹೊಸ ವಿಚಾರಗಳನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಅಳವಡಿಸುವ ಮೂಲಕ ಶಿಕ್ಷಕ ಸಮೂಹವನ್ನು ಜಾಗೃತಿಗೊಳಿಸಿ ಹೆಚ್ಚೆಚ್ಚು ಕೆಲಸ ಮಾಡುವಂತೆ ಪ್ರೋತ್ಸಾಹಿಸಿ ಗುಣಮಟ್ಟದ ಶಿಕ್ಷಣ ಹೊರಹೊಮ್ಮುವಂತೆ ಮಾಡಿದ್ದಾರೆ.
ನಿವೃತ್ತಿಯ ನಿಮಿತ್ತ ಎಂ.ಎ. ರಡ್ಡೇರರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಸಭಾಪತಿಗಳಾದ ಬಸವರಾಜ್ ಹೊರಟ್ಟಿ ದಂಪತಿಗಳು ದತ್ತು ಪಡೆದ ಸ್ಥಳೀಯ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಜುಲೈ 31ರಂದು ಬೆಳಿಗ್ಗೆ 9.15 ಗಂಟೆಗೆ ಶ್ರೀ ಬಸವರಾಜ್ ಹೊರಟ್ಟಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.