ವಿಜಯಸಾಕ್ಷಿ ಸುದ್ದಿ, ಗದಗ: ಶಾಲೆಯು ಸಮುದಾಯದ ಒಂದು ಭಾಗವಾಗಿದ್ದು, ಭಾಗೀದಾರರು ಹಾಗೂ ಪೋಷಕರ ವಿಶ್ವಾಸ ಹಾಗೂ ಸಹಕಾರವು ಸರಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಹೀಗಾಗಿ ಸಮುದಾಯದ ಸಹಭಾಗಿತ್ವದೊಂದಿಗೆ ಪೋಷಕರ ಶಿಕ್ಷಕರ ಮಹಾಸಭೆಯನ್ನು ಯಶಸ್ವಿಗೊಳಿಸೋಣ ಎಂದು ಗದಗ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಹೇಳಿದರು.
ಅವರು ಗುರುವಾರ ಗದಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ನವೆಂಬರ್ 14ರ ಪೋಷಕರ ಶಿಕ್ಷಕರ ಮಹಾಸಭೆಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಶುಕ್ರವಾರ ನಡೆಯಲಿರುವ ಪೋಷಕರ ಹಾಗೂ ಶಿಕ್ಷಕರ ಮಹಾಸಭೆಯು ರಾಜ್ಯಾದ್ಯಂತ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಜರುಗಲಿದ್ದು, ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ಜಿಲ್ಲಾ ಯೋಜನಾ ಉಪ ನಿರ್ದೇಶಕ ರವಿಪ್ರಕಾಶ್ ಮಾತನಾಡಿ, ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯೇ ನಮ್ಮೆಲ್ಲರ ಗುರಿಯಾಗಿದೆ. ಪಾಲಕ-ಪೋಷಕರ ಸಹಭಾಗಿತ್ವ ಸರ್ಕಾರಿ ಶಾಲೆಗಳಿಗೆ ಸ್ಪೂರ್ತಿ ನೀಡುತ್ತಿವೆ. ಅದಕ್ಕಾಗಿ ಪಾಲಕರು ಆಗಾಗ ಶಾಲೆಗೆ ಭೇಟಿ ನೀಡುವಂತೆ ಕ್ರಮವಹಿಸಬೇಕೆಂದರು.
ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ಶಾಲೆಗಳು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುತ್ತವೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ವೈಯುಕ್ತಿಕ ಗಮನದೊಂದಿಗೆ ಸರ್ಕಾರಿ ಸೌಲಭ್ಯಗಳನ್ನು ಮಕ್ಕಳಿಗೆ ತಲುಪಿಸಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದ್ದು, ಪಾಲಕರ ಸಹಭಾಗಿತ್ವದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.
ಕಾರ್ಯಕ್ರಮದಲ್ಲಿ ಗದಗ ನಗರ ವಲಯದ ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಪಿ. ಪ್ರಭಯನಮಠ, ಎ.ಪಿ.ಸಿ.ಓ ಶಿವಕುಮಾರ್ ಕುರಿ, ಎಸ್.ಕೆ. ಮಂಗಳಗುಡ್ಡ, ಪ್ರಶಾಂತ ಕನಾಜ, ಸಂಪನ್ಮೂಲ ವ್ಯಕ್ತಿಗಳಾದ ಐ.ಬಿ. ಮಡಿವಾಳರ, ಕವಿತಾ ಬೇಲೇರಿ, ವಿದ್ಯಾ ಗದ್ದಾಳೆ ಮುಂತಾದವರಿದ್ದರು.
ಗದಗ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಶೆಟ್ಟಪ್ಪನವರ ಮಾತನಾಡಿ, ಸರ್ಕಾರಿ ಶಾಲಾ ಶಿಕ್ಷಣದ ಉತ್ತಮ ಗುಣಮಟ್ಟ, ಹಾಜರಾತಿ, ಮಧ್ಯಾಹ್ನ ಬಿಸಿ ಊಟ, ಪಠ್ಯಪುಸ್ತಕ, ಸಮವಸ್ತ್ರ, ಉಚಿತ ಆರೋಗ್ಯ ತಪಾಸಣೆ ಜೊತೆಗೆ ಪೂರಕ ಪೌಷ್ಟಿಕ ಆಹಾರ ವಿತರಣೆ—ಇವೆಲ್ಲವೂ ಇಲಾಖೆಯ ನಿಯಮಾನುಸಾರ ಮಕ್ಕಳಿಗೆ ಉಚಿತವಾಗಿ ವಿತರಿಸಲಾಗುತ್ತಿದ್ದು, ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕೆಂದರು.


