ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಬಾಣಂತಿ ಹಾಗೂ ಗರ್ಭಿಣಿ ಮಹಿಳೆಯರ ಸಾವು ರಾಜ್ಯದಲ್ಲಿ ಸಾಕಷ್ಟು ಸುದ್ದಿಯಾಗಿದೆ. ಆದ್ದರಿಂದ ಬಾಣಂತಿಯರ ಸಾವಿಗೆ ನ್ಯಾಯ ಕೊಡಿಸಲು, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಹಾಗೂ ಕೇಂದ್ರ ಸರ್ಕಾರದಿಂದ ಸಂಶೋಧನಾ ತಂಡವನ್ನು ಕಳುಹಿಸಿ ಪರಿಶೀಲಿಸಬೇಕೆಂದು ಸಂಸದ ಡಾ. ಕೆ ಸುಧಾಕರ್ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಅವರು ಸಚಿವರಿಗೆ ಪತ್ರ ಬರೆದಿರುವ ಸುಧಾಕರ್, ಕಳೆದ ಕೆಲವು ತಿಂಗಳಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಮೃತಪಡುವ ಘಟನೆ ವರದಿಯಾಗುತ್ತಿದೆ. 2024ರ ನವೆಂಬರ್ವರೆಗೆ 348 ತಾಯಂದಿರು ಮೃತಪಟ್ಟಿದ್ದಾರೆ. ಆಗಸ್ಟ್ನಿಂದ ನವೆಂಬರ್ವರೆಗೆ ಕೇವಲ 4 ತಿಂಗಳಲ್ಲಿ 217 ಪ್ರಕರಣ ವರದಿಯಾಗಿದೆ.
ಈ 217 ಪ್ರಕರಣಗಳಲ್ಲಿ 179 ಪ್ರಕರಣಗಳು ಸರ್ಕಾರಿ ಆಸ್ಪತ್ರೆಗಳಿಗೆ ಸಂಬಂಧಿಸಿದ್ದಾಗಿದೆ. ಹೆಚ್ಚಿನವು ಪಿಪಿಎಚ್ ಹಾಗೂ ಎಎಫ್ಇ, ಅನೀಮಿಯ ಹಾಗೂ ನಿರ್ವಹಣೆಯಲ್ಲಿ ಲೋಪಕ್ಕೆ ಸಂಬಂಧಿಸಿದೆ. ಆಂಟಿಬಯೋಟಿಕ್ ಕೊರತೆ, ತರಬೇತಿ ಹೊಂದಿರುವ ಸಿಬ್ಬಂದಿ ಕೊರತೆ ಮೊದಲಾದವು ಕೂಡ ಇದಕ್ಕೆ ಕಾರಣ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಇದರಲ್ಲಿ ಲಿಂಜರ್ಸ್ ಲ್ಯಾಕ್ಟೇಟ್ ದ್ರಾವಣದಲ್ಲಿ ದೋಷ ಕೂಡ ಕಾರಣ ಎನ್ನಲಾಗುತ್ತಿದೆ. ಈ ಕುರಿತು ಸಮಗ್ರವಾದ ಪರಿಶೀಲನೆ ನಡೆಯುವ ಅಗತ್ಯವಿದೆ. ಮೊದಲಿಗೆ, ತಾಯಂದಿರ ಮರಣಕ್ಕೆ ಕಾರಣ ಪತ್ತೆ ಮಾಡಲು ತುರ್ತಾಗಿ ಕಾರ್ಯಯೋಜನೆ ರೂಪಿಸಬೇಕಿದೆ. ಜೊತೆಗೆ ಕೇಂದ್ರ ಸರ್ಕಾರದಿಂದ ಸಂಶೋಧನಾ ತಂಡವನ್ನು ಕಳುಹಿಸಿ, ಕಾರಣ ಪತ್ತೆ ಜೊತೆಗೆ, ಪರಿಹಾರ ಶಿಫಾರಸು ಮಾಡಬೇಕಿದೆ.
ಗರ್ಭಿಣಿಯರ ಆರೈಕೆ ಹಾಗೂ ಹೆರಿಗೆ ಸಮಯದಲ್ಲಿ ಉತ್ತಮ ಸೇವೆ ನೀಡಲು ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕಿದೆ. ಕಬ್ಬಿಣಾಂಶದ ಆಹಾರ ಸೇವನೆ, ತುರ್ತು ಆರೈಕೆ, ಪ್ರತಿ ದಿನ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಗರ್ಭಿಣಿಯರಿಗೆ ಮಾಹಿತಿ ನೀಡಿ ಅರಿವು ಮೂಡಿಸಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.