ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಸಾರ್ವಜನಿಕರು ತಾವು ಬಾಕಿ ಉಳಿಸಿಕೊಂಡಿರುವ ವಿವಿಧ ತೆರಿಗೆಯನ್ನು ಪೂರ್ಣವಾಗಿ ಪಾವತಿಸಿ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೀರ್ತಿ ಪಾಟೀಲ ವಿನಂತಿಸಿದರು.
ಸಮೀಪದ ಅಡವಿಸೋಮಾಪೂರ ಗ್ರಾ.ಪಂ ವ್ಯಾಪ್ತಿಯ ಅಡವಿಸೋಮಾಪೂರ ದೊಡ್ಡ ಮತ್ತು ಸಣ್ಣ ತಾಂಡೆ, ಪಾಪಾನಾಶಿ, ಪಾಪನಾಶಿ ತಾಂಡೆಯಲ್ಲಿ ಕರ ವಸೂಲಾತಿ ಅಭಿಯಾನ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರಕಾರ ನೀಡುವ ಅನುದಾನದೊಂದಿಗೆ ಗ್ರಾಮದಿಂದ ಬರುವ ತೆರಿಗೆಯು ಬೀದಿ ದೀಪ ನಿರ್ವಹಣೆ, ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಹಲವು ಮೂಲಭೂತ ಸೌಲಭ್ಯಕ್ಕೆ ಅನುಕೂಲವಾಗುತ್ತದೆ. ಆದ್ದರಿಂದ ಗ್ರಾಮಸ್ಥರು ತಮ್ಮ ಸ್ವ ಇಚ್ಛೆಯಿಂದ ಕರವನ್ನು ಪಾವತಿಸಬೇಕೆಂದು ವಿನಂತಿಸಿಕೊAಡರು.
ಅಭಿವೃದ್ಧಿ ಅಧಿಕಾರಿ ಅಮೀರನಾಯ್ಕ ಮಾತನಾಡಿ2024 ಸೆ.1ರಿಂದ ಮಾರ್ಚ್ 31ರವರೆಗೂ ಕರ ವಸೂಲಾತಿ ಅಭಿಯಾನ ನಡೆಯಲಿದ್ದು, ಮನೆ, ಕಟ್ಟಡ, ನಿವೇಶನ, ಅಂಗಡಿ, ವಾಣಿಜ್ಯ ಮಳಿಗೆ ಮತ್ತು ವಿಶೇಷ ನೀರಿನ ಕರ ಸೇರಿದಂತೆ ವಿವಿಧ ತೆರಿಗೆಯನ್ನು ಸಾರ್ವಜನಿಕರ ಮನವೊಲಿಸಿ ಪಾವತಿಸಿಕೊಳ್ಳಲಾಗುತ್ತಿದೆ. ಅಡವಿಸೋಮಾಪೂರ ಗ್ರಾ.ಪಂ ವ್ಯಾಪ್ತಿಯಲ್ಲಿ 1994ರಿಂದ 2024ರವರೆಗೂ ೮೮ ಲಕ್ಷ ರೂ ಬಾಕಿ ಇದೆ. ಇದರಲ್ಲಿ 18 ಲಕ್ಷ ರೂ ಈ ವರ್ಷದ ಬಾಕಿ ಇದ್ದು, ಇದರಲ್ಲಿ 12.5ಲಕ್ಷ ರೂ ವಸೂಲಾಗಿದೆ. 4-5 ವರ್ಷದಿಂದ ತೆರಿಗೆಯನ್ನು ಬಾಕಿ ಉಳಿಸಿಕೊಂಡರ ಮನವೊಲಿಸಿ ತೆರಿಗೆ ಪಾವತಿಸಿಕೊಳ್ಳಲಾಗುತ್ತಿದೆ ಎಂದರು.