Homecultureಮಾನವೀಯ ಮೌಲ್ಯಗಳು ಬದಲಾಗದಿರಲಿ : ರಂಭಾಪುರಿ ಶ್ರೀಗಳು

ಮಾನವೀಯ ಮೌಲ್ಯಗಳು ಬದಲಾಗದಿರಲಿ : ರಂಭಾಪುರಿ ಶ್ರೀಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಕುಷ್ಟಗಿ : ಸಮಾಜದಲ್ಲಿ ಸ್ಥಾನ-ಮಾನಗಳು ಹಾಗೂ ಆಸ್ತಿ-ಪಾಸ್ತಿಗಳು ಕೆಲವೊಮ್ಮೆ ಬದಲಾಗದಬಹುದು. ಆದರೆ ಮಾನವೀಯ ಮೌಲ್ಯಗಳು ಮತ್ತು ಮಾನವೀಯ ಸಂಬಂಧಗಳು ಎಂದೆಂದಿಗೂ ಬದಲಾಗದಂತಿರಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶನಿವಾರ ತಾಲೂಕಿನ ಚಳಗೇರಾ ಹಿರೇಮಠದ ಲಿಂ.ವಿರೂಪಾಕ್ಷಲಿಂಗ ಶ್ರೀಗಳವರ ಲಿಂಗಾಂಗ ಸಾಮರಸ್ಯದ ದಶಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಜಗತ್ತು ಮತ್ತು ಜನ ಎಷ್ಟೇ ಬದಲಾದರೂ ಮಾನವ ಸಂಬಂಧಗಳು ಸಡಿಲಗೊಳ್ಳಬಾರದು. ಬಾಂಧವ್ಯ ಸಂಬಂಧಗಳನ್ನು ಮರೆತರೆ ಮನುಷ್ಯನಿಗೂ ಯಂತ್ರಕ್ಕೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ವ್ಯಕ್ತಿಗೆ ಕೊಳೆ ಅಂಟಿದರೆ ಶುದ್ಧ ಮಾಡಬಹುದು. ವ್ಯಕ್ತಿತ್ವವೇ ಕೊಳಕಾಗಿದ್ದರೆ ತೊಳೆಯುವುದು ಕಷ್ಟ. ವಿನಯ ಸರಳತೆ ಸೌಜನ್ಯಗಳು ವ್ಯಕ್ತಿತ್ವಕ್ಕೆ ಶೋಭೆ ನೀಡುವ ಆಭರಣಗಳಷ್ಟೇ ಅಲ್ಲ, ಸುತ್ತ ಮುತ್ತಲ ವಾತಾವರಣವನ್ನು ಪರಿಶುದ್ಧಗೊಳಿಸುವ ಶಕ್ತಿಯಿರುತ್ತದೆ.

ಕಷ್ಟ ಬಂದಾಗ ಕಲ್ಲಿನಂತಿರಬೇಕು. ಸುಖ ಬಂದಾಗ ಹೂವಿನಂತೆ ಮಧುರವಾಗಿರಬೇಕು. ಲಿಂ.ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಭಕ್ತರ ಬಾಳಿನಲ್ಲಿ ಸಂಸ್ಕಾರ ಸಂಸ್ಕೃತಿಯನ್ನು ಬೋಧಿಸಿ ಸನ್ಮಾರ್ಗಕ್ಕೆ ಕರೆತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ವೀರಶೈವ ಧರ್ಮ ಸಂಹಿತೆ ಮತ್ತು ಶ್ರೀ ಜಗದ್ಗುರು ರೇಣುಕಾಚಾರ್ಯರ ಆದರ್ಶ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ವಿರೂಪಾಕ್ಷಲಿಂಗ ಶ್ರೀಗಳು ಶ್ರಮಿಸಿದ್ದನ್ನು ಮರೆಯಲಾಗದೆಂದರು.

ಸಮಾರಂಭ ಉದ್ಘಾಟಿಸಿದ ಮಾಜಿ ಮುಖ್ಯ ಮಂತ್ರಿ-ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಒಳ್ಳೆಯತನಕ್ಕೆ ಬೆಲೆ ಇಲ್ಲ ಎನ್ನುವುದು ಎಷ್ಟು ಸತ್ಯವೋ ಆ ಒಳ್ಳೆಯತನ ಕೈ ಬಿಡುವುದಿಲ್ಲ ಅನ್ನುವುದೂ ಅಷ್ಟೇ ಸತ್ಯ. ಬದುಕಿಗೆ ಭಯ ಮುಖ್ಯವಲ್ಲ, ಭರವಸೆ ಮುಖ್ಯ. ಲಿಂ.ವಿರೂಪಾಕ್ಷಲಿಂಗ ಶಿವಾಚಾರ್ಯರು ತಮ್ಮ ಬದುಕನ್ನು ಭಕ್ತರ ಕಲ್ಯಾಣಕ್ಕಾಗಿ ಸದಾ ಮುಡುಪಾಗಿಟ್ಟಿದ್ದರು ಎಂದರು.

ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು, ಎಮ್ಮಿಗನೂರು ವಾಮದೇವ ಮಹಂತ ವೀರಭದ್ರ ಶಿವಾಚಾರ್ಯರು, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿದರು.

ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಹೆಚ್.ಪಾಟೀಲ 100 ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯಕ್ಕೆ ಶಿಲಾನ್ಯಾಸ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕರಾದ ಅಮರೇಗೌಡ ಪಾಟೀಲ ಬಯ್ಯಾಪುರ, ಕೆ.ಶರಣಪ್ಪ ವಕೀಲರು, ಪರಣ್ಣ ಮುನವಳ್ಳಿ, ಸಮಾಜ ಸೇವಕ ಎಸ್.ಆರ್. ನವಲಿ ಹಿರೇಮಠ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.

ಈ ಪವಿತ್ರ ಸಮಾರಂಭದಲ್ಲಿ ಹರಸೂರು ಸಿದ್ಧರಾಮ ಶಿವಾಚಾರ್ಯರು, ಮಂಗಳೂರು ಸಿದ್ಧಲಿಂಗ ಶಿವಾಚಾರ್ಯರು, ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮಿಗಳು, ಕಲಾದಗಿ ಗಂಗಾಧರ ಶಿವಾಚಾರ್ಯರು, ಬಿಕನಳ್ಳಿ ಸಿದ್ಧೇಶ್ವರ ಶಿವಾಚಾರ್ಯರು ಸೇರಿದಂತೆ 25 ಜನ ಮಠಾಧೀಶರು ಪಾಲ್ಗೊಂಡಿದ್ದರು.

ದಾನಿಗಳಿಗೆ ಮತ್ತು ಶ್ರೀ ಮಠದ ಶಿಷ್ಯರಿಗೆ ಸ್ಮರಣಿಕೆ ಫಲ ಪುಷ್ಪವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ 3 ಜೋಡಿ ನವ ದಂಪತಿಗಳು ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು.

ನೇತೃತ್ವ ವಹಿಸಿದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮುಖವಾಡದ ಬದುಕು ಮೂರು ದಿನ. ಬಣ್ಣದ ಬದುಕು ಆರು ದಿನ. ನಿಯತ್ತಿನ ಬದುಕು ನೂರು ದಿನ. ಸಂಪತ್ತು ಉಳ್ಳವರು ಶ್ರೀಮಂತರಲ್ಲ. ಸಂತಸ ಉಳ್ಳಾತನೇ ನಿಜವಾದ ಶ್ರೀಮಂತ. ಲಿಂ.ವಿರೂಪಾಕ್ಷಲಿಂಗ ಶಿವಾಚಾರ್ಯರು ತಾವು ಕಷ್ಟ ಅನುಭವಿಸಿ ನಂಬಿದ ಭಕ್ತರ ಬಾಳಿಗೆ ಬೆಳಕನ್ನು ಕರುಣಿಸಿದ ಕಾರುಣ್ಯ ಮೂರ್ತಿಯೆಂದರು.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!