ರಾಯಚೂರು:- ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ಭಕ್ತರನ್ನು ವಂಚಿಸುತ್ತಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ಎಚ್ಚರವಹಿಸುವಂತೆ ಮಂತ್ರಾಲಯ ಮಠದಿಂದ ಭಕ್ತರಿಗೆ ಸಲಹೆ ನೀಡಲಾಗಿದೆ.
ಎಸ್, ಮಂತ್ರಾಲಯ ಮಠಕ್ಕೆ ಸೇರಿದ ವಿಜಯೇಂದ್ರ ವಸತಿ ಗೃಹದ ಆನ್ಲೈನ್ ಹೆಸರಿನಲ್ಲಿ ಓರ್ವ ಭಕ್ತರಿಗೆ ವಂಚನೆ ಮಾಡಿರುವಂತಹ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಅಕ್ಷಿತಾ ಎಂಬುವರಿಗೆ ಆನ್ಲೈನ್ ಬುಕ್ಕಿಂಗ್ ಹೆಸರಲ್ಲಿ ಮುಂಗಡವಾಗಿ 2000 ರೂ. ಜಮೆ ಮಾಡಿಸಿಕೊಂಡು ಬಳಿಕ ಪ್ರತಿಕ್ರಿಯೆ ನೀಡದೆ ವಂಚಿಸಲಾಗಿದೆ. ಭಕ್ತರಿಗೆ ವಂಚನೆ ಬೆಳಕಿಗೆ ಬೆನ್ನಲ್ಲೇ ಶ್ರೀ ಮಠದಿಂದ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ಆಂದ್ರದ ಕರ್ನೂಲ್ ಸೈಬರ್ ಠಾಣೆಗೆ ವರ್ಗಾವಣೆ ಕೂಡ ಮಾಡಲಾಗಿದೆ.
ಇನ್ನು ಈ ಬಗ್ಗೆ ಮಂತ್ರಾಲಯ ಆಡಳಿತ ಮಂಡಳಿ ಪ್ರತಿಕ್ರಿಯಿಸಿದ್ದು, ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯಕ್ಕೆ ಕೊಠಡಿಗಳು ಅಥವಾ ಸೇವೆಗಳನ್ನು ಕಾಯ್ದಿರಿಸಲು ಮತ್ತು ದೇಣಿಗೆ ಸಂಗ್ರಹಿಸಲು ಯಾವುದೇ ವ್ಯಕ್ತಿ, ಏಜೆನ್ಸಿಗೆ ಅಧಿಕಾರ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಶ್ರೀ ಮಠದ ಪ್ರತಿ ವಸತಿ ಗೃಹಗಳ ಬುಕ್ಕಿಂಗ್ಗೆ www.srsmatha.org. ಮೂಲಕ ಮಾತ್ರ ಬುಕ್ಕಿಂಗ್ ಮಾಡಿಕೊಳ್ಳುವಂತೆ ಭಕ್ತರಿಗೆ ಸಲಹೆ ನೀಡಿದೆ.