ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಪಿಎಸ್‌ಐ ಈರಣ್ಣ ರಿತ್ತಿ ಅಮಾನತ್ತಿಗೆ ಆಗ್ರಹಿಸಿ ಗೋಸಾವಿ ಸಮಾಜ ಮತ್ತು ಶ್ರೀರಾಮ ಸೇನೆ ಕಾರ್ಯಕರ್ತರು ಇಲ್ಲಿನ ತಹಸೀಲ್ದಾರ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂಗಳವಾರ 6ನೇ ದಿನಕ್ಕೆ ಕಾಲಿಟ್ಟಿದ್ದು, ನವೆಂಬರ್ 6ರಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಲು ಹೋರಾಟಗಾರರು ನಿರ್ಧರಿಸಿದ್ದಾರೆ.
ಗೋಸಾವಿ ಸಮಾಜದ ಮುಖಂಡ ಬಾಳಪ್ಪ ಗೋಸಾವಿ ಮಾತನಾಡಿ, ಪಿಎಸ್‌ಐ ಈರಪ್ಪ ರಿತ್ತಿ ಅವರನ್ನು ಅಮಾನತ್ತು ಮಾಡಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ಆದರೆ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರಣ, ಪ್ರತಿಭಟನೆಯ ಉಗ್ರ ಸ್ವರೂಪವಾಗಿ ಬುಧವಾರದಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ತಹಸೀಲ್ದಾರರ ಕಚೇರಿ ಎದುರೇ ಧರಣಿ ನಡೆಸುತ್ತಿದ್ದರೂ ತಹಸೀಲ್ದಾರರು ನಮ್ಮ ಹೋರಾಟಕ್ಕೆ ಬೆಲೆ ನೀಡಿಲ್ಲ. ಕನಿಷ್ಠಪಕ್ಷ ಸಮಸ್ಯೆ ಕುರಿತು ನಮ್ಮ ಜೊತೆ ಚರ್ಚಿಸಿಲ’ ಎಂದು ಶ್ರೀರಾಮ ಸೇನೆ ಕಾರ್ಯಕರ್ತ ಬಸವರಾಜ ಚಕ್ರಸಾಲಿ ಆರೋಪಿಸಿದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ತಾಲೂಕು ಘಟಕದ ಅಧ್ಯಕ್ಷ ಈರಣ್ಣ ಪೂಜಾರ, ಪ್ರಾಣೇಶ ವ್ಯಾಪಾರಿ, ಕುಮಾರ ನಡಿಗೇರ, ಸತೀಶ ಕುಂಬಾರ, ಹರೀಶ ಗೋಸಾವಿ, ಗೋವಿಂದ ಗೋಸಾವಿ, ಚಿನ್ನು ಹಾಳದೊಟದ, ಅಶೋಕ ಅಯ್ಯನಗೌಡ್ರ ಇದ್ದರು.