ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣ ಪಂಚಾಯಿತಿಯ ಹಿಂಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡವನ್ನು ನರೇಗಲ್ಲದಲ್ಲಿ ಶೀಘ್ರವೇ ಪ್ರಾರಂಭವಾಗಲಿರುವ ಭಾರತೀಯ ಸ್ಟೇಟ್ ಬ್ಯಾಂಕಿಗೆ ಬಾಡಿಗೆ ಆಧಾರದ ಮೇಲೆ ನೀಡಲು ಪ.ಪಂ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.
ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಸದಸ್ಯರೆಲ್ಲರೂ ಈ ವಿಷಯವನ್ನು ಒಕ್ಕೊರಲಿನಿಂದ ಅನುಮೋದಿಸಿದರು. ಸದಸ್ಯ ಶ್ರೀಶೈಲಪ್ಪ ಬಂಡಿಹಾಳರ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ ನಿಡಶೇಶಿ ಮಾಹಿತಿ ನೀಡಿ, ಬ್ಯಾಂಕಿನ ಅಧಿಕಾರಿಗಳು ಕಟ್ಟಡವನ್ನು ಒಪ್ಪಿಕೊಂಡು ಹೋಗಿದ್ದಾರೆ. ಅದರಲ್ಲಿ ಕೆಲವಷ್ಟು ಅನುಕೂಲತೆಗಳನ್ನು ಮಾಡಿಕೊಡಲು ತಿಳಿಸಿದ್ದಾರೆ. ಇನ್ನು ಹದಿನೈದು ದಿನಗಳಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಪೂರ್ಣಗೊಳ್ಳುವುದು. ಅದಕ್ಕೆ 39 ಸಾವಿರ ರೂ.ಗಳ ತಿಂಗಳ ಬಾಡಿಗೆ ನಿಗದಿಪಡಿಸಲಾಗಿದೆ ಎಂದರು.
ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿ, ನಿರ್ಮಾಣಗೊಳ್ಳುವ ಈ ಕಟ್ಟಡವನ್ನು ಬಾಡಿಗೆ ನೀಡುವುದರಿಂದ ಪ.ಪಂಗೆ ಆದಾಯ ಬರುತ್ತದೆ. ಅವರಿಗೆ ಕಟ್ಟಡವನ್ನು ಹಸ್ತಾಂತರ ಮಾಡುವ ಮುಂಚೆ ಭದ್ರತಾ ಠೇವಣಿ ಮತ್ತು ಎಷ್ಟು ವರ್ಷಗಳ ಕಾಲ ಭೋಗ್ಯಕ್ಕೆ ಕೊಡಬೇಕು ಎಂಬುದರ ಬಗ್ಗೆ ಎಲ್ಲರೂ ಸೇರಿ ನಿರ್ಧರಿಸೋಣ ಎಂದರು.
ಸದಸ್ಯ ರಾಚಯ್ಯ ಮಾಲಗಿತ್ತಿಮಠ ಮಾತನಾಡಿ, ಕಟ್ಟಡವನ್ನು 12 ವರ್ಷಗಳ ಭೋಗ್ಯಕ್ಕೆ ಕೊಡಿ. ಪ್ರತಿ ಮೂರು ವರ್ಷಗಳಿಗೊಮ್ಮೆ ಬಾಡಿಗೆಯನ್ನು ಹೆಚ್ಚಿಸಿ ಎಂದು ಸೂಚಿಸಿದರು. 15ನೇ ಹಣಕಾಸು ಹಾಗೂ ಎಸ್.ಎಫ್.ಸಿ ಯೋಜನೆಯಡಿಯಲ್ಲಿನ ಆಡಳಿತಾತ್ಮಕ ಮಂಜೂರಿಗೆ ಸಭೆ ಒಪ್ಪಿಗೆ ನೀಡಿತು.
ಕಾರ್ಯಪಾಲಕ ಅಭಿಯಂತರ ಜಗದೀಶ ಹೊಸಮನಿ ಮಾತನಾಡಿ, ಅಮೃತ-2 ಯೋಜನೆ ಈಗಾಗಲೇ ಪ್ರಾರಂಭವಾಗಿದ್ದು, 57 ಕಿ.ಮಿ ಪೈಪ್ಲೈನ್ ಹಾಕುವ ಯೋಜನೆ ಇದಾಗಿದೆ. ಅದರಲ್ಲಿ 47 ಕಿ.ಮಿ ಮುಕ್ತಾಯವಾಗಿದೆ. ಒಟ್ಟು 4500 ಮನೆಗಳಿಗೆ ನಳ ಸಂಪರ್ಕ ನೀಡಬೇಕಿದ್ದು, ಈಗಾಗಲೇ 1100 ಮನೆಗಳಿಗೆ ಸಂಪರ್ಕ ನೀಡಲಾಗಿದೆ ಎಂದರು.
ಈ ವೇಳೆ ನಿವೃತ್ತ ಪೌರ ಕಾರ್ಮಿಕರಿಗೆ, ಪದೋನ್ನತಿ ಹೊಂದಿದ ಸಂಜು ಗುಡಿಮನಿ ಅವರಿಗೆ ಸನ್ಮಾನ ಜರುಗಿತು. ಸ್ಥಾಯಿ ಸಮಿತಿ ಚೇರಮನ್ ಮುತ್ತಪ್ಪ ನೂಲ್ಕಿ, ಕಿರಿಯ ಅಭಿಯಂತರ ವಿರೇಂದ್ರಸಿಂಗ್ ಕಾಟೇವಾಲ, ಸದಸ್ಯರು, ಸಿಬ್ಬಂದಿಯವರು ಇದ್ದರು.
ಸದಸ್ಯೆ ಜ್ಯೋತಿ ಪಾಯಪ್ಪಗೌಡ್ರ ಮಾತನಾಡಿ, ಅಮೃತ್-2 ಯೋಜನೆ ಕಾರ್ಯ ನಡೆದಿದ್ದು, 9ನೇ ವಾರ್ಡ್ನಲ್ಲಿ ಪೈಪ್ಲೈನ್ ಅಳವಡಿಸುವಾಗ ಕೆಲವು ಕಡೆ ಒಳ ಚರಂಡಿ ಪೈಪ್ಲೈನ್ ಹಾಗೂ ನೀರಿನ ಪೈಪ್ಲೈನ್ ಒಡೆದಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಕರೆ ಮಾಡಿದರೆ ಯಾರೂ ಕರೆ ಸ್ವೀಕರಿಸುತ್ತಿಲ್ಲ ಎಂದು ಹೊಸಮನಿಯವರಿಗೆ ಕೇಳಿದಾಗ, ಹಳೆಯ ಪೈಪ್ ಒಡೆದರೆ ಗುತ್ತಿಗೆದಾರರೇ ಹಾಕಿಕೊಡಬೇಕು ಎಂದರು.



