ಬೆಂಗಳೂರು:- ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಈ ಬಾರಿ ರೈತರಿಗೆ ಸಿಹಿ ಸುದ್ದಿ ಕೊಡಲು ನಿರ್ಧಾರ ಮಾಡಿದ್ದೇವೆ. ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ಮುಂದಾಗಿದ್ದು, 8 ಸಾವಿರ ಕೋಟಿ ರೂ. ರೈತರಿಗೆ ಸಿಗಲಿದೆ ಎಂದರು.
ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ಮುಂದಾಗಿದ್ದೇವೆ. ಸುಮಾರು 7 ಲಕ್ಷ ರೈತರಿಂದ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ಬೆಂಬಲ ಬೆಲೆ ಅಡಿ ಖರೀದಿಗೆ ನಿರ್ಧಾರ ಮಾಡಲಾಗಿದೆ. ಈ ವರ್ಷ ರಾಗಿ 6 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ನಿರ್ಧಾರ ಮಾಡಲಾಗಿದೆ. ಈ ಬಾರಿ ಪ್ರತಿ ರೈತರಿಂದ ಗರಿಷ್ಠ 50 ಕ್ವಿಂಟಾಲ್ ಖರೀದಿಗೆ ನಿರ್ಧರಿಸಲಾಗಿದೆ. ಸೆಪ್ಟೆಂಬರ್ನಿಂದ ನೋಂದಣಿ ಪ್ರಾರಂಭ ಮಾಡುತ್ತೇವೆ. ಜನವರಿಯಿಂದ ಮಾರ್ಚ್ ವರೆಗೂ ಖರೀದಿ ಮಾಡ್ತೀವಿ. 4,886 ರೂ. ಪ್ರತಿ ಕ್ವಿಂಟಾಲ್ಗೆ ನೀಡಿ ಖರೀದಿಗೆ ನಿರ್ಧಾರ ಮಾಡಲಾಗಿದೆ. ಕಳೆದ ವರ್ಷಕ್ಕಿಂತ 596 ರೂ.ಹೆಚ್ಚಳ ಮಾಡಲಾಗಿದೆ.
ಭತ್ತ 3 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ನಿರ್ಧರಿಸಲಾಗಿದೆ. ಇದು ಸಹ ಸೆಪ್ಟೆಂಬರ್ನಿಂದ ನೋಂದಣಿ ಶುರುವಾಗಲಿದೆ. ನವೆಂಬರ್, ಡಿಸೆಂಬರ್ನಲ್ಲಿ ಖರೀದಿ ಮಾಡುತ್ತೇವೆ. 2,369 ರೂ. ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ ಕೊಡುತ್ತೇವೆ. ಈ ವರ್ಷ 69 ರೂ. ಜಾಸ್ತಿ ಕೊಡ್ತಿದ್ದೇವೆ. ಇನ್ನೂ ಬಿಳಿ ಜೋಳ 3 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ನಿರ್ಧರಿಸಲಾಗಿದ್ದು, ಪ್ರತಿ ಕ್ವಿಂಟಾಲ್ಗೆ 3,669 ರೂ. ಕೊಡಲು ನಿರ್ಧಾರ ಮಾಡಲಾಗಿದೆ. ಕಳೆದ ವರ್ಷಕ್ಕಿಂತ 328 ರೂ. ಜಾಸ್ತಿ ನೀಡಲಾಗುತ್ತಿದೆ. ಅಕ್ಟೋಬರ್ನಿಂದ ನೋಂದಣಿ ಪ್ರಾರಂಭವಾಗಲಿದ್ದು, ಡಿಸೆಂಬರ್ ನಿಂದ ಮಾರ್ಚ್ ವರೆಗೆ ಖರೀದಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.