ತಿರುವನಂತಪುರಂ: ಸಾಮಾಜಿಕ ಜಾಲತಾಣದಲ್ಲಿ ವ್ಯೂವ್ಸ್ ಮತ್ತು ಪ್ರಚಾರದ ಹಂಬಲ ಒಂದು ಅಮಾಯಕ ಜೀವದ ಅಂತ್ಯಕ್ಕೆ ಕಾರಣವಾಗಿದೆಯೇ? ಎಂಬ ಪ್ರಶ್ನೆಯನ್ನು ಎಬ್ಬಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶಿಂಜಿತಾ ಮುಸ್ತಫಾಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಬಸ್ಸಿನಲ್ಲಿ ದೀಪಕ್ ಎಂಬ ಯುವಕ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿ ಶಿಂಜಿತಾ ಬಿಡುಗಡೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಆದರೆ, ಈ ಘಟನೆ ಬಳಿಕ ದೀಪಕ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರು.
ಈ ಘಟನೆ ನಂತರ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು. ದೀಪಕ್ ಯಾವುದೇ ತಪ್ಪು ಮಾಡದೇ ಇದ್ದರೂ ಆತನ ಬಳಿಗೆ ಹೋಗಿ ಉದ್ದೇಶಪೂರ್ವಕವಾಗಿ ವಿಡಿಯೋ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದವು. ಶಿಂಜಿತಾಳನ್ನು ಬಂಧಿಸಬೇಕೆಂದು ಜನರು ಒತ್ತಾಯಿಸಿದರು.
ದೀಪಕ್ ಅವರ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಜಾಮೀನುರಹಿತ ಕಲಂಗಳ ಅಡಿ ಪ್ರಕರಣ ದಾಖಲಿಸಿದರು. ತನಿಖೆ ಆರಂಭವಾಗುತ್ತಿದ್ದಂತೆಯೇ ಶಿಂಜಿತಾ ಮೊಬೈಲ್ ಆಫ್ ಮಾಡಿ ಕಾಣೆಯಾಗಿದ್ದಳು. ಇದೀಗ ಕೋಯಿಕ್ಕೋಡ್‌ನ ಬಡಗರ ಪ್ರದೇಶದಲ್ಲಿ ಬಂಧನಕ್ಕೊಳಗಾಗಿದ್ದು, ನ್ಯಾಯಾಲಯ ನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸರು ಬಸ್ ಚಾಲಕ, ಕಂಡಕ್ಟರ್ ಮತ್ತು ಪ್ರಯಾಣಿಕರ ಹೇಳಿಕೆಗಳನ್ನು ದಾಖಲಿಸಿದ್ದು, ಯಾರೂ ಕೂಡ ಪ್ರಯಾಣದ ವೇಳೆ ಯಾವುದೇ ಗಲಾಟೆ ಅಥವಾ ಕಿರುಕುಳ ನಡೆದಿಲ್ಲ ಎಂದು ತಿಳಿಸಿದ್ದಾರೆ. ಕಂಡಕ್ಟರ್ ಕೂಡ ಶಿಂಜಿತಾ ಯಾವುದೇ ಸಹಾಯ ಕೇಳಿರಲಿಲ್ಲ ಎಂದು ಹೇಳಿದ್ದಾರೆ.



