ಬೆಂಗಳೂರು: ಎಸ್.ಎಂ ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಃಖವಾಗಿದೆ ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಸಂತಾಪ ಸೂಚಿಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅವರು, ಎಸ್.ಎಂ ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಃಖವಾಗಿದೆ. ಎಸ್‌ಎಂ ಕೃಷ್ಣ ಅವರು ಕರ್ನಾಟಕಕ್ಕೆ ಐಟಿ-ಬಿಟಿ ದೃಷ್ಟಿಯಲ್ಲಿ ಒಂದು ದಿಕ್ಕು ದೆಸೆಯನ್ನು ತೋರಿದವರು, ಹೀಗಾಗಿ ನಮ್ಮ ರಾಜ್ಯ ಯಾವತ್ತಿಗೂ ಕೂಡ ಅವರಿಗೆ ಚಿರಋಣಿಯಾಗಿರಬೇಕು.
ಭೂದಾಖಲೆಗಳ ಡಿಜಿಟಲೀಕರಣದ ಮೂಲ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಲಿಕ್ಕರ್ ಲಾಬಿ ಮಾಫಿಯಾ ತಡೆಗೆ ಶ್ರಮಪಟ್ಟವರು. ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಜಾರಿಗೆ ತಂದವರು. ಎಸ್‌ಎಂಕೆ ಅವರಿಂದಲೇ ಮೈಸೂರು, ಹುಬ್ಬಳ್ಳಿ, ಮಂಗಳೂರಿನಲ್ಲಿ ಇನ್‌ಫೋಸಿಸ್ ಟ್ರೈನಿಂಗ್ ಸೆಂಟರ್ ಪ್ರಾರಂಭವಾಯಿತು. ಜೊತೆಗೆ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಅಡಿಪಾಯ ಹಾಕಿದರು ಎಂದು ತಿಳಿಸಿದರು.
ದೇಶದ ಅತ್ಯಂತ ಸಂಪದ್ಭರಿತ ಮತ್ತು ಜಿಡಿಪಿ ಬೆಳವಣಿಗೆ ವಿಚಾರದಲ್ಲಿ ಪ್ರತಿ ವರ್ಷ 2 ಅಥವಾ 3ನೇ ಸ್ಥಾನದಲ್ಲಿ ಬರುತ್ತದೆ. ಜೊತೆಗೆ ರಾಜ್ಯದ ಆದಾಯದ ಪೈಕಿ ಶೇ.56-57ರಷ್ಟು ಬೆಂಗಳೂರಿನಿಂದ ಬರುತ್ತದೆ. ಕರ್ನಾಟಕದ ಪಾಲಿಗೆ ಬೆಂಗಳೂರು ಕಾಮಧೇನು ಇದ್ದಂತೆ. ಇದಕ್ಕೆ ಎಸ್‌ಎಂಕೆ ಅವರ ಕೊಡುಗೆ ಸಾಕಷ್ಟಿದೆ. ಒಬ್ಬ ಒಳ್ಳೆಯ ಮುಖ್ಯಮಂತ್ರಿಯಾಗಿ, ಒಳ್ಳೆಯ ಆಡಳಿತವನ್ನು ನೀಡಿದ್ದರು. ಎಸ್.ಎಂ ಕೃಷ್ಣ ಅವರು ನನ್ನ ಒಬ್ಬ ಇಷ್ಟದ ಸಿಎಂ ಆಗಿದ್ದರು ಎಂದು ಸ್ಮರಿಸಿದರು.


