ಬೆಂಗಳೂರು: ನಗರದಲ್ಲಿ ವೈವಾಹಿಕ ಜಾಲತಾಣದ ಮೂಲಕ ಯುವತಿಯರನ್ನು ಮೋಸಗೊಳಿಸಿ ಲಕ್ಷಾಂತರ ರೂಪಾಯಿ ವಂಚಿಸಿರುವ ಭಾರೀ ಪ್ರಕರಣ ಬೆಳಕಿಗೆ ಬಂದಿದೆ. ಹೆಂಡತಿಯನ್ನು ತನ್ನ ಅಕ್ಕ ಎಂದು ಪರಿಚಯಿಸಿಕೊಂಡು ಯುವತಿಯ ವಿಶ್ವಾಸ ಗೆದ್ದ ಆರೋಪಿ ವಿಜಯ್ ರಾಜ್ ಗೌಡ ಇದೀಗ ಪೊಲೀಸರ ಬಂಧನದಲ್ಲಿದ್ದಾನೆ.
ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿದ ಆರೋಪದ ಮೇರೆಗೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸ್ಥಳಾಧಿಕಾರದ ಆಧಾರದಲ್ಲಿ ಪ್ರಕರಣವನ್ನು ಕೆಂಗೇರಿ ಠಾಣೆಗೆ ವರ್ಗಾಯಿಸಲಾಗಿತ್ತು. ತನಿಖೆ ವೇಳೆ ೨೦೧೯ರಿಂದ ಹಲವಾರು ಮಹಿಳೆಯರನ್ನು ಇದೇ ರೀತಿಯಲ್ಲಿ ಮೋಸಗೊಳಿಸಿರುವುದು ಬಹಿರಂಗವಾಗಿದೆ.
ಕುಣಿಗಲ್, ಅತ್ತಿಬೆಲೆ, ಶಿವಮೊಗ್ಗ, ಆನೇಕಲ್, ಕಾಡುಗೋಡಿ ಸೇರಿದಂತೆ ಹಲವು ಠಾಣೆಗಳಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿವೆ. ದೊಡ್ಡ ಉದ್ಯಮಿ ಎಂದು ತಾನು ಬಿಂಬಿಸಿಕೊಂಡು, ಹಣ ಪ್ರೀಜ್ ಆಗಿದೆ ಎಂದು ನಕಲಿ ದಾಖಲೆ ತೋರಿಸಿ ಹಣ ಪಡೆದುಕೊಳ್ಳುತ್ತಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಇತ್ತೀಚಿನ ಪ್ರಕರಣದಲ್ಲಿ ಯುವತಿಯೊಬ್ಬಳಿಂದ ೧ ಕೋಟಿ ೫೩ ಲಕ್ಷ ರೂಪಾಯಿ ವಂಚಿಸಿರುವುದು ದೃಢಪಟ್ಟಿದೆ. ಮಾಜಿ ಸಂಸದರ ಹೆಸರು ಬಳಸಿ ಟೆಂಡರ್ ಕೊಡಿಸುವುದಾಗಿ ನಂಬಿಸಿ, ನಕಲಿ ಸಹಿ-ಮುದ್ರೆಗಳ ಮೂಲಕ ಕೂಡ ವಂಚನೆ ನಡೆಸಿರುವ ಆರೋಪವೂ ಇದೆ. ಈ ಬಗ್ಗೆ ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ಮಾಹಿತಿ ನೀಡಿದ್ದಾರೆ.



