ಹಾಸನ: ಭೂಸ್ವಾಧೀನ ಮಾಡಿಕೊಂಡು ವರ್ಷಗಳಾದರೂ ಪರಿಹಾರ ನೀಡದ ಹಿನ್ನೆಲೆ ಹಾಸನ ಜಿಲ್ಲಾಧಿಕಾರಿಗಳ ಕಾರನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿರುವ ಘಟನೆ ಜಿಲ್ಲೆಯಲ್ಲಿ ಗಮನ ಸೆಳೆದಿದೆ. ಕೋರ್ಟ್ ಆದೇಶದಂತೆ ರೈತರು ವಕೀಲರೊಂದಿಗೆ ಆಗಮಿಸಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಕಾರನ್ನು ಜಪ್ತಿ ಮಾಡಿದ್ದಾರೆ.
ಯಗಚಿ ನಾಲೆ ನಿರ್ಮಾಣಕ್ಕಾಗಿ ಸುಮಾರು 15 ವರ್ಷಗಳ ಹಿಂದೆ ಆಲೂರು ತಾಲೂಕಿನ ಭಕ್ತರವಳ್ಳಿ ಗ್ರಾಮದ ರೈತ ಮರಿಗೌಡ ಅವರಿಗೆ ಸೇರಿದ ಸರ್ವೆ ನಂ. 44/1 ರಲ್ಲಿನ 10.5 ಗುಂಟೆ ಜಮೀನನ್ನು ನೀರಾವರಿ ಇಲಾಖೆ ಸ್ವಾಧೀನಪಡಿಸಿಕೊಂಡಿತ್ತು. ಈ ಜಮೀನಿಗೆ ಸರ್ಕಾರದಿಂದ 11,22,559 ರೂ. ಪರಿಹಾರ ನೀಡಬೇಕಾಗಿದ್ದರೂ, ದೀರ್ಘಕಾಲ ಕಳೆದರೂ ಹಣ ಪಾವತಿಯಾಗಿರಲಿಲ್ಲ. ಇದರಿಂದ ಬೇಸತ್ತ ರೈತ ಮರಿಗೌಡ ಹಾಗೂ ಅವರ ಮಕ್ಕಳು ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯ ಜಿಲ್ಲಾಧಿಕಾರಿಗಳ ಕಾರು ಜಪ್ತಿ ಮಾಡುವಂತೆ ಆದೇಶ ನೀಡಿದ ಹಿನ್ನೆಲೆ, ಮಧ್ಯಾಹ್ನ ವಕೀಲ ಮಂಜುನಾಥ್ ಅವರೊಂದಿಗೆ ಆಗಮಿಸಿದ ರೈತರು ಡಿಸಿ ಕಾರನ್ನು ಜಪ್ತಿ ಮಾಡಿದರು. ಈ ವೇಳೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ನಿರತರಾಗಿದ್ದರು.
ಅವರ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಬಿ.ಎ. ಸ್ಥಳಕ್ಕೆ ಆಗಮಿಸಿ, ಸಂಜೆಯೊಳಗೆ ಪರಿಹಾರ ನೀಡಲಾಗುವುದು, ಸ್ವಲ್ಪ ಸಮಯ ನೀಡಿ ಎಂದು ಮನವಿ ಮಾಡಿದರು. ಆದರೆ, ವಕೀಲರು ಮತ್ತು ರೈತರು ಈ ಮನವಿಗೆ ಒಪ್ಪದೆ, ಜಪ್ತಿ ಮಾಡಲಾದ ಕಾರನ್ನು ಎಳೆದೊಯ್ಯಲು ವಾಹನ ತರಿಸಿದರು.
ಆದರೆ ಇನ್ನೋವಾ ಕಾರನ್ನು ಎಳೆದರೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಚಾಲಕ ವಾಹನವನ್ನು ವಾಪಸ್ ತೆಗೆದುಕೊಂಡು ಹೋದನು. ಸದ್ಯ ರೈತರು ಜಪ್ತಿ ಮಾಡಿದ ಜಿಲ್ಲಾಧಿಕಾರಿಗಳ ಕಾರಿನ ಬಳಿಯೇ ಕುಳಿತುಕೊಂಡಿದ್ದು, ಪರಿಹಾರ ನೀಡುವವರೆಗೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.



