ದಾವಣಗೆರೆ: ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಯ ಮೋಟಾರು ದುರಸ್ತಿ ಸೇರಿದಂತೆ ಅಭಿವೃದ್ಧಿಗಾಗಿ ಗ್ರಾಮ ಪಂಚಾಯತಿ ಬಿಲ್ ಪಾವತಿ ಮಾಡದ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರೊಬ್ಬರು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕು ಪಂಚಾಯತ್ ಮುಂಭಾಗ ನಡೆದಿದೆ.
ಭರಮಸಮುದ್ರ ಗ್ರಾಮದ ತಿಪ್ಪೇಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ ಗ್ರಾ ಪಂ ಉಪಾಧ್ಯಕ್ಷರಾಗಿದ್ದು, ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಮೋಟರ್ ದುರಸ್ತಿ, ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಬಿಲ್ ಪಾವತಿ ಮಾಡದೇ ಅಲೆದಾಡುಸುತ್ತಿದ್ದರು. ಪಿಡಿಒ ಸೇರಿದಂತೆ ಹಲವು ಅಧಿಕಾರಿಗಳಿಗೆ ಈ ಕುರಿತು ಮನವಿ ಮಾಡಿಕೊಂಡರು ನಿರ್ಲಕ್ಷ್ಯ ತೋರಲಾಗಿತ್ತು.
ಇತ್ತ ಸಾಲಗಾರರ ಕಾಟ , ಅತ್ತ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನನೊಂದ ಗ್ರಾಪಂ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಇಂದು ಒಂದು ಲೀಟರ್ ಪೆಟ್ರೋಲ್ ಹಿಡಿದು ತಾಲ್ಲೂಕು ಪಂಚಾಯತ್‌ಗೆ ಆಗಮಿಸಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ತಿಪ್ಪೇಸ್ವಾಮಿ ಮೇಲೆ ನೀರು ಹಾಕಿ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಈ ವೇಳೆ ಪಿಡಿಒ ಕೊಟ್ರೇಶ್ , ಇಒ ವಿರುದ್ದ ತಿಪ್ಪೇಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.


