ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ಗಂಭೀರ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆ ದೆಹಲಿ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದ್ದು, ನರ್ಸರಿಯಿಂದ 5ನೇ ತರಗತಿಯವರೆಗೆ ಎಲ್ಲಾ ಶಾಲೆಗಳ ದೈಹಿಕ (ಆಫ್‌ಲೈನ್) ತರಗತಿಗಳನ್ನು ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಿದೆ.
ದೆಹಲಿಯ ಎಲ್ಲಾ ಸರ್ಕಾರಿ, ಸರ್ಕಾರೇತರ ಹಾಗೂ ಖಾಸಗಿ ಶಾಲೆಗಳಿಗೆ ಈ ಆದೇಶ ಅನ್ವಯವಾಗುತ್ತದೆ ಎಂದು ಶಿಕ್ಷಣ ನಿರ್ದೇಶನಾಲಯ ಸ್ಪಷ್ಟಪಡಿಸಿದೆ. ಮಕ್ಕಳ ಶಿಕ್ಷಣಕ್ಕೆ ಅಡಚಣೆ ಆಗದಂತೆ ನರ್ಸರಿಯಿಂದ 5ನೇ ತರಗತಿಯವರೆಗೆ ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಇದೀಗಾಗಲೇ ಡಿಸೆಂಬರ್ 13ರಂದು ಹೊರಡಿಸಿದ್ದ ಆದೇಶದಂತೆ, 6ನೇ ತರಗತಿ ಮತ್ತು ಅದಕ್ಕಿಂತ ಮೇಲಿನ ತರಗತಿಗಳು ಶಾಲೆಯಲ್ಲೇ ಮುಂದುವರಿಯುತ್ತವೆ.
ದೆಹಲಿಯ ಗಾಳಿಯು ಅತ್ಯಂತ ವಿಷಕಾರಿಯಾಗಿದ್ದು, ಕಣ್ಣು ಕೆರಕುವುದು, ಉಸಿರಾಟದ ತೊಂದರೆ, ಹೃದಯ ಹಾಗೂ ಶ್ವಾಸಕೋಶ ಸಂಬಂಧಿತ ಕಾಯಿಲೆಗಳ ಅಪಾಯ ತೀವ್ರವಾಗಿ ಹೆಚ್ಚುತ್ತಿದೆ. ದೆಹಲಿಯ ವಾಯು ಮಾಲಿನ್ಯ ಸಮಸ್ಯೆ ಇದೀಗ ದೇಶೀಯ ಮಟ್ಟಕ್ಕೆ ಸೀಮಿತವಾಗದೇ ಅಂತರರಾಷ್ಟ್ರೀಯ ಚರ್ಚೆಯ ವಿಷಯವಾಗಿದೆ. ಸಿಂಗಾಪುರ, ಬ್ರಿಟನ್ ಮತ್ತು ಕೆನಡಾ ಸೇರಿದಂತೆ ಹಲವು ದೇಶಗಳು ದೆಹಲಿಯಲ್ಲಿ ಉಸಿರಾಡುವ ಕುರಿತು ತಮ್ಮ ನಾಗರಿಕರಿಗೆ ಎಚ್ಚರಿಕೆ ನೀಡಲು ಆರಂಭಿಸಿವೆ.



