ನವದೆಹಲಿ:- ದೆಹಲಿಯ ಕೆಂಪಕೋಟೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿದರು.
ಇಂದು ದೇಶಾದ್ಯಂತ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿದರು.
ಕೆಂಪುಕೋಟೆಗೆ ಆಗಮಿಸುತ್ತಿದ್ದಂತೆಯೇ ಮೋದಿ ಅವರನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವಾಗತಿಸಿದರು. ಬಳಿಕ ಪಿಎಂ ಮೋದಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ರಾಷ್ಟ್ರಗೀತೆ ಮೊಳಗಿತು. ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು. ಬಳಿಕ ಭಾರತೀಯ ವಾಯುಪಡೆಯ ಎರಡು Mi-17 ಹೆಲಿಕಾಪ್ಟರ್‌ಗಳು ಕೆಂಪು ಕೋಟೆಯ ಮೇಲೆ ಹಾರಾಟ ನಡೆಸಿ, ಪುಷ್ಪವೃಷ್ಟಿಗೈದವು. ಒಂದು ಹೆಲಿಕಾಪ್ಟರ್ ತಿರಂಗವನ್ನು ಹಾರಾಡಿಸಿತು. ಮತ್ತೊಂದು ಹೆಲಿಕಾಪ್ಟರ್, ಆಪರೇಷನ್ ಸಿಂಧೂರ್‌ನ ಬ್ಯಾನರ್ ಅನ್ನು ಪ್ರದರ್ಶಿಸಿತು. ಆ ಮೂಲಕ ಶತ್ರು ದೇಶಗಳಿಗೆ ದಿಟ್ಟ ಉತ್ತರ ಕೊಟ್ಟ ಆಪರೇಷನ್ ಸಿಂಧೂರ ಬಗ್ಗೆ ಅರಿವು ಮೂಡಿಸಿತು.
ಧ್ವಜಾರೋಹಣಕ್ಕೂ ಮುನ್ನ ದೆಹಲಿಯ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು. ನಂತರ ರಾಷ್ಟ್ರದ ನೇತೃತ್ವ ವಹಿಸಿ ಸಂಭ್ರಮಿಸಲು ಕೆಂಪು ಕೋಟೆಗೆ ಆಗಮಿಸಿದರು ಎನ್ನಲಾಗಿದೆ.
ಧ್ವಜಾರೋಹಣ ಬಳಿಕ ಮೋದಿ ಭಾಷಣ:
ಭಾರತದಲ್ಲಿ ಹುಟ್ಟುವ ನದಿಗಳ ನೀರಿನ ಮೇಲೆ ಕೇವಲ ಭಾರತೀಯರು ಹಾಗೂ ಇಲ್ಲಿನ ರೈತರಿಗೆ ಮಾತ್ರ ಹಕ್ಕಿದೆ ಎಂದು ಹೇಳಿದ್ದಾರೆ. ಇಷ್ಟು ವರ್ಷ ಭಾರತದಲ್ಲಿ ಹುಟ್ಟುವ ನೀರು ಶತ್ರುಗಳ ಹೊಲಗಳಿಗೆ ನೀರುಣಿಸುತ್ತಿತ್ತು.ನಮ್ಮ ಭೂಮಿ ನೀರಿಲ್ಲದೆ ಬರಿದಾಗುತ್ತಿತ್ತು.ಕಳೆದ ಏಳು ದಶಕಗಳಿಂದ ನನ್ನ ದೇಶದ ರೈತರಿಗೆ ಊಹಿಸಲಾಗದ ನಷ್ಟವನ್ನುಂಟುಮಾಡಿರುವ ಒಪ್ಪಂದ ಯಾಕೆ ಬೇಕು ಎಂದು ಪ್ರಶ್ನಿಸಿದರು. ರೈತರು ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ನಾವು ಈ ಸಿಂಧೂ ಜಲ ಒಪ್ಪಂದಕ್ಕೆ ಮತ್ತೆ ಒಪ್ಪಿಗೆ ನೀಡುವುದಿಲ್ಲ ಎಂದರು.
ಭಯೋತ್ಪಾದನೆ ಮತ್ತು ಅದನ್ನು ಪೋಷಿಸುವವರನ್ನು ನಾವು ಇನ್ನು ಮುಂದೆ ಬೇರೆ ಬೇರೆ ಎಂದು ಪರಿಗಣಿಸುವುದಿಲ್ಲ. ಉಗ್ರರಿಗೆ ಸಹಾಯ ಮಾಡುವವರನ್ನು ಕೂಡ ಉಗ್ರರಂತೆಯೇ ಕಾಣುತ್ತೇವೆ ಎಂದು ಹೇಳಿದರು.
ನ್ಯೂಕ್ಲಿಯರ್ ಬೆದರಿಕೆ ಸಹಿಸುವುದಿಲ್ಲ
ಹಾಗೆಯೇ ಭಾರತವು ಪರಮಾಣು ಬೆದರಿಕೆಗಳನ್ನು ಸಹಿಸುವುದಿಲ್ಲ, ಭವಿಷ್ಯದಲ್ಲಿ ನಮಗೆ ತೊಂದರೆ ಮಾಡಲು ಶತ್ರುಗಳು ಆಲೋಚಿಸಿದರೂ ನಮ್ಮ ಸೇನೆಯು ತಕ್ಕ ಉತ್ತರ ನೀಡುತ್ತದೆ. ನಮ್ಮ ಇಂಧನ ಅಗತ್ಯಗಳಿಗಾಗಿ ನಾವು ಅನೇಕ ದೇಶಗಳನ್ನು ಅವಲಂಬಿಸಿದ್ದೇವೆ, ನಾವು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಇತರ ದೇಶಗಳಿಂದ ಪೆಟ್ರೋಲ್, ಡೀಸೆಲ್ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳಬೇಕಾಗಿದೆ.
ನಾವು ಸವಾಲನ್ನು ಸ್ವೀಕರಿಸಿದ್ದೇವೆ ಮತ್ತು 11 ವರ್ಷಗಳಲ್ಲಿ ಸೌರಶಕ್ತಿ ಹೆಚ್ಚಾಗಿದೆ. ಜಲವಿದ್ಯುತ್ ವಿಸ್ತರಿಸಲು ಮತ್ತು ಶುದ್ಧ ಶಕ್ತಿಯನ್ನು ಪಡೆಯಲು ನಾವು ಹೊಸ ಅಣೆಕಟ್ಟುಗಳನ್ನು ನಿರ್ಮಿಸುತ್ತಿದ್ದೇವೆ. ಇಂದು, ಭಾರತವು ಮಿಷನ್ ಗ್ರೀನ್ ಹೈಡ್ರೋಜನ್‌ನಲ್ಲಿ ಸಾವಿರಾರು ಕೋಟಿಗಳನ್ನು ಹೂಡಿಕೆ ಮಾಡುತ್ತಿದೆ. ಪರಮಾಣು ಶಕ್ತಿಯಲ್ಲಿ 10 ಹೊಸ ಪರಮಾಣು ರಿಯಾಕ್ಟರ್‌ಗಳು ಕಾರ್ಯನಿರ್ವಹಿಸುತ್ತಿವೆ. 2047 ರ ವೇಳೆಗೆ, ಪರಮಾಣು ಶಕ್ತಿ ಸಾಮರ್ಥ್ಯವನ್ನು 10 ಪಟ್ಟು ಹೆಚ್ಚಿಸುವ ಸಂಕಲ್ಪದೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ಪರಮಾಣು ಶಕ್ತಿ ಕ್ಷೇತ್ರದಲ್ಲಿ ನಾವು ದೊಡ್ಡ ಬದಲಾವಣೆಗಳನ್ನು ತರುತ್ತೇವೆ. ಖಾಸಗಿ ವಲಯಕ್ಕೆ ನಾವು ಪರಮಾಣು ಶಕ್ತಿಯ ಬಾಗಿಲುಗಳನ್ನು ತೆರೆದಿದ್ದೇವೆ.
ಆಪರೇಷನ್ ಸಿಂಧೂರ್‌ನಲ್ಲಿ ಭಾರತ ಎಷ್ಟು ಸ್ವಾವಲಂಬಿಯಾಗಿದೆ ಎಂದು ನಾವು ನೋಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಶತ್ರುಗಳಿಗೆ ಕ್ಷಣಾರ್ಧದಲ್ಲಿ ಅವರನ್ನು ನಾಶಮಾಡುವ ಶಕ್ತಿ ಏನೆಂದು ತಿಳಿದಿರಲಿಲ್ಲ. ಕಳೆದ 10 ವರ್ಷಗಳಿಂದ, ನಾವು ಮೇಕ್ ಇನ್ ಇಂಡಿಯಾವನ್ನು ಒಂದು ಧ್ಯೇಯವಾಗಿ ತೆಗೆದುಕೊಳ್ಳುತ್ತಿದ್ದೇವೆ. 21 ನೇ ಶತಮಾನವು ತಂತ್ರಜ್ಞಾನದ ಶತಮಾನವಾಗಿದೆ.
ನಾವು ಸ್ವದೇಶಿ ಉತ್ಪನ್ನಗಳನ್ನು ಬಲವಂತದಿಂದ ಅಲ್ಲ ಬದಲಾಗಿ ತಾಕತ್ತಾಗಿ ಬಳಸಬೇಕು. ವೂಕಲ್ ಫಾರ್ ಲೋಕಲ್ ಅನ್ನು ಎಲ್ಲಾ ಭಾರತೀಯರ ಮಂತ್ರವಾಗಿ ಮಾಡಬೇಕು.ಭಾರತದ ಜನರ ಬೆವರಿನಿಂದ ತಯಾರಿಸಿದ ಮತ್ತು ನಮ್ಮ ಜನರ ಕಠಿಣ ಪರಿಶ್ರಮದ ತಯಾರಿಸಿದ ವಸ್ತುಗಳನ್ನು ಮಾತ್ರ ನಾವು ಖರೀದಿಸಬೇಕು.ಆಗ ದೇಶವು ಕೆಲವೇ ದಿನಗಳಲ್ಲಿ ಬದಲಾಗುತ್ತದೆ.
ದೇಶದ ಯುವಕರಿಗೆ ತಮ್ಮ ಆಲೋಚನೆಗಳನ್ನು ಎಂದಿಗೂ ಸಾಯಲು ಬಿಡಬೇಡಿ.ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ. ಸೈಬರ್ ಭದ್ರತೆಯಿಂದ ಹಿಡಿದು ಕೃತಕ ಬುದ್ಧಿಮತ್ತೆಯವರೆಗೆ ಎಲ್ಲವೂ ನಮ್ಮದಾಗಿರುವುದು ಇಂದಿನ ಅಗತ್ಯವಲ್ಲವೇ? ನಮ್ಮ ಜನರ ಶಕ್ತಿ ಇದರಲ್ಲಿ ಭಾಗಿಯಾಗಬೇಕು. ಇಂದು, ಅದು ಸಾಮಾಜಿಕ ಮಾಧ್ಯಮವಾಗಲಿ ಅಥವಾ ವಿಶ್ವದ ಇತರ ವೇದಿಕೆಗಳಾಗಲಿ, ನಾವು ವಿಶ್ವದ ವೇದಿಕೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಯುಪಿಐನ ಶಕ್ತಿಯನ್ನು ಜಗತ್ತಿಗೆ ತೋರಿಸಿದ್ದೇವೆ. ಡಿಜಿಟಲ್ ವಹಿವಾಟಿನಲ್ಲಿ ಭಾರತ ಮಾತ್ರ ಶೇಕಡಾ 50 ರಷ್ಟು ಕೊಡುಗೆ ನೀಡುತ್ತಿದೆ.
ಸಮುದ್ರದ ಕೆಳಗೆ ತೈಲ ನಿಕ್ಷೇಪಗಳನ್ನು ಹುಡುಕುವ ನಿಟ್ಟಿನಲ್ಲಿ ನಾವು ಒಂದು ಮಿಷನ್ ಮೋಡ್‌ನಲ್ಲಿ ಕೆಲಸ ಮಾಡಲು ಬಯಸುತ್ತೇವೆ. ಭಾರತವು ಆಳವಾದ ನೀರಿನ ಪರಿಶೋಧನಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ಇದು ನಮ್ಮ ಪ್ರಮುಖ ಘೋಷಣೆಯಾಗಿದೆ. ಇಂದು ಜಗತ್ತು ನಿರ್ಣಾಯಕ ಖನಿಜಗಳ ಬಗ್ಗೆ ಜಾಗರೂಕವಾಗಿದೆ. ನಿರ್ಣಾಯಕ ಖನಿಜಗಳಲ್ಲಿ ಸ್ವಾವಲಂಬನೆಯೂ ನಮಗೆ ಅತ್ಯಗತ್ಯ.
ರಕ್ಷಣಾ, ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಲ್ಲಿ ನಿರ್ಣಾಯಕ ಖನಿಜಗಳು ಬಹಳ ದೊಡ್ಡ ಪಾತ್ರವನ್ನು ವಹಿಸುತ್ತವೆ. ಅದಕ್ಕಾಗಿಯೇ ನಾವು ರಾಷ್ಟ್ರೀಯ ನಿರ್ಣಾಯಕ ಮಿಷನ್ ಅನ್ನು ಪ್ರಾರಂಭಿಸಿದ್ದೇವೆ ಎಂದರು.